ದಾವಣಗೆರೆ : ಬೀಡಿ ಕಾರ್ಮಿಕರು ಮಾಲೀಕರಿಂದ ಸಾಕಷ್ಟು ಅನ್ಯಾಯಕ್ಕೊಳಗಾಗುತ್ತಿದ್ದು, ತಮ್ಮ ನ್ಯಾಯಯುತ ಜೀವನಕ್ಕಾಗಿ ಸಂಘಟಿತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹೇಳಿದರು.
ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಭಾಂಗಣದಲ್ಲಿ ಭಾರತದ ಮೊದಲ ಶಿಕ್ಷಕಿಯರಾದ ಫಾತಿಮಾ ಶೇಖ್-ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರ ಬಿಡುಗಡೆಗೊಳಿಸಿ, ಮಾತನಾಡಿದರು.
ಬೀಡಿ ಕಾರ್ಮಿಕರಿಗೂ ಸೌಲಭ್ಯಗಳಿವೆ. ಅಧಿಕೃತವಾಗಿ ನೋಂದಣಿಯಾಗಿರಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಮದುವೆಗೆ ಪ್ರೋತ್ಸಾಹಧನ, ಪಿಂಚಣಿ, ಇಎಸ್‌ಐ ಮೊದಲಾದ ಸೌಲಭ್ಯಗಳಿವೆ. ಆದರೆ, ಬೀಡಿ ಕಾರ್ಮಿಕರು ವಂಚಿತರಾಗಿದ್ದು, ಅವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೀಡಿ ಕಾರ್ಮಿಕರ ಮಕ್ಕಳು ಆಗಾಗ್ಗೆ ಅಪಾಯಕಾರಿ ಮತ್ತು ಆಶ್ರಯವಿಲ್ಲದೆ ಒರಟು ಜೀವನ ಸಹಿಸಿಕೊಳ್ಳುತ್ತಿದ್ದಾರೆ. ವಯಸ್ಕರು ಚಿಕ್ಕ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕೆಲಸ ಮಾಡಲು ಬಲವಂತ ಮಾಡುತ್ತಾರೆ, ಭಿಕ್ಷೆ ಬೇಡಿಸುತ್ತಾರೆ, ಇದು ಅಪರಾಧ. ಅವರು ಮೌಖಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ನಿಂದನೆಗೆ ಒಳಗಾಗುತ್ತಾರೆ. ಬೀದಿ ಮಕ್ಕಳ ವಿರುದ್ಧ ನಿಂದನೆ ಮತ್ತು ಹಿಂಸಾಚಾರದ ವರದಿಗಳಿವೆ. ಹೆಚ್ಚಿನ ಮಕ್ಕಳಿಗೆ ಗುರುತಿನ ಚೀಟಿ ಅಥವಾ ಇತರ ದಾಖಲೆಗಳ ಕೊರತೆಯಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಮನೆಯಲ್ಲಿ ದೈನಂದಿನ ಕೆಲಸ ಮಾಡುತ್ತಲೇ ಬೀಡಿ ಕಟ್ಟಿ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದರು. ಗಂಡು ಮಕ್ಕಳು ದುಡಿಯದ ಎಷ್ಟೋ ಮನೆಗಳಲ್ಲಿ ಬೀಡಿ ಕಟ್ಟುವ ಮಹಿಳೆಯರೇ ಆಧಾರವಾಗಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡಬೇಕು ಎಂದು ಹೇಳಿದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಸಮಾಜ ಸುಧಾರಕರು ಎಂದು ಸ್ಮರಿಸಿದರು.
ದಲಿತ ಮುಸ್ಲಿಂ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯೆ ಸಬ್ರೀನ್ ತಾಜ್, ಕಾರ್ಯದರ್ಶಿ ಎಂ.ಕರಿಬಸಪ್ಪ ಇದ್ದರು.