ಜಿಲ್ಲೆ

ಭಯ ತೊರೆದು ಪೊಲೀಸರಿಗೆ ಮಾಹಿತಿ ನೀಡಿ

ರಮೇಶ ಜಹಗೀರದಾರ್

ದಾವಣಗೆರೆ : ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ನ್ಯಾಯಾಧೀಶ ಶ್ರೀಪಾದ ಹೇಳಿದರು.
 ನಗರದ ಆ್ಯಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೊ ಅರಿವು ಹಾಗೂ ಮಕ್ಕಳ ಹಕ್ಕುಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
 ಅಂಥ ಘಟನೆಗಳು ನಡೆದಾಗ ಭಯ, ಮುಜುಗರದಿಂದ ಸಹಿಸಿಕೊಳ್ಳಬಾರದು. ಸಂತ್ರಸ್ತರ ಹಿತ ಕಾಪಾಡಲು ನ್ಯಾಯಾಂಗ ಬದ್ಧವಾಗಿದೆ. ಸಂತ್ರಸ್ತರ ಗುರುತು ಸಾರ್ವಜನಿಕರಿಗೆ ತಿಳಿಯದಂತೆ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಎಚ್ಚರ ವಹಿಸುತ್ತವೆ ಎಂದು ತಿಳಿಸಿದರು.
 ಪೊಲೀಸರು ಸಮವಸ್ತ್ರದಲ್ಲೇ ಸಂತ್ರಸ್ತ ಮಕ್ಕಳ ವಿಚಾರಣೆ ನಡೆಸುವಂತಿಲ್ಲ. ಪಾಲಕರ ಸಮ್ಮುಖದಲ್ಲಿಯೇ ಪ್ರಕ್ರಿಯೆ ನಡೆಸಬೇಕು. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರೇ ಚಿಕಿತ್ಸೆ ನೀಡಬೇಕು ಎಂಬ ಕಾನೂನು ಇದೆ ಎಂದು ಮಾಹಿತಿ ನೀಡಿದರು.
 ಆರೋಪಿ ಹಾಗೂ ಸಂತ್ರಸ್ತೆ ಮುಖಾಮುಖಿಯಾಗದಂತೆ ಪೊಲೀಸರು ಎಚ್ಚರ ವಹಿಸುತ್ತಾರೆ. ಆ ಮೂಲಕ ದೌರ್ಜನ್ಯಕ್ಕೆ ಒಳಗಾದವರು ಭಯಪಡದಂತೆ ನೋಡಿಕೊಳ್ಳುತ್ತಾರೆ. ವಿಚಾರಣೆ ಪ್ರಕ್ರಿಯೆಯು ಮಕ್ಕಳ ಹಕ್ಕುಗಳ ರಕ್ಷಣೆಗೆ ಪೂರಕವಾಗಿರುತ್ತದೆ ಎಂದು ತಿಳಿಸಿದರು.
 ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಮಾತನಾಡಿ, ಮಕ್ಕಳು ಉತ್ತಮವಾಗಿ ಬದುಕುವ, ಶಿಕ್ಷಣ ಪಡೆಯುವ ಹಕ್ಕು ಹೊಂದಿದ್ದಾರೆ. ಈ ಹಕ್ಕುಗಳ ರಕ್ಷಣೆಗಾಗಿಯೇ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
 ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಆರ್. ಚೌಬೇ ಮಾತನಾಡಿ, ವಿದ್ಯಾರ್ಥಿಗಳು ಯೋಗ, ವಿದ್ಯಾಭ್ಯಾಸ, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. 112 ಗೆ ಕರೆ ಮಾಡುವ ಮೂಲಕ ತುರ್ತು ಸೇವೆ ಪಡೆಯಬಹುದು ಎಂದು ತಿಳಿಸಿದರು.
 ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಶೌಕತ್ ಅಲಿ ವಿಷಯ ಮಂಡಿಸಿದರು. ಶಾಲೆಯ ಆಡಳಿತ ಅಧಿಕಾರಿ ಫೈರೋಜ್, ಪ್ರಮುಖರಾದ ಫರೀದ್ ಅಹಮ್ಮದ್, ನಾಜ್ನೀನ್ ಸುಲ್ತಾನ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.