ದಾವಣಗೆರೆ : ಆರ್ಥಿಕವಾಗಿ ಹಿಂದುಳಿದಿರುವ ಪತ್ರಕರ್ತರಿಗೆ ನಿವೇಶನ ಒದಗಿಸಲು ಸಿಎಂ ಮತ್ತು ವಸತಿ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಏರ್ಪಡಿಸಿದ್ದ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಾನೂ ಕೂಡ ಗ್ರಾಮೀಣ ಭಾಗದಿಂದಲೇ ವೃತ್ತಿ ಆರಂಭಿಸಿರುವುದರಿಂದ ಪತ್ರಕರ್ತ ಸಮುದಾಯದ ಸಮಸ್ಯೆ, ಸಂಕಷ್ಟಗಳನ್ನು ಅನುಭವಿಸಿದ್ದೇನೆ. ಹೀಗಾಗಿ ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಜಿಲ್ಲಾ ವರದಿಗಾರರ ಕೂಟಕ್ಕೆ ನಿವೇಶನ ಒದಗಿಸಲು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದರೆ ಕ್ಯಾಬಿನೆಟ್ನಲ್ಲಿಟ್ಟು ಮಂಜೂರು ಮಾಡಲಾಗುವುದು. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ನಿಧಿಯಿಂದಲೂ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 3 ಸಾವಿರ ರೂ. ಇದ್ದ ಪತ್ರಕರ್ತರ ಪಿಂಚಣಿಯನ್ನು 15 ಸಾವಿರದ ವರೆಗೆ ಹೆಚ್ಚಿಸಿತು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕು ಎನ್ನುವಷ್ಟರಲ್ಲಿ ಸರ್ಕಾರ ಬದಲಾಗಿದ್ದರಿಂದ ಆ ವಿಚಾರ ನನೆಗುದಿಗೆ ಬಿದ್ದಿತ್ತು. ಈಗ ಎರಡನೇ ಅವಧಿಗೆ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕಠಿಣ ನಿಯಮಗಳನ್ನು ಸರಳೀಕರಣಗೊಳಿಸಿ ರಾಜ್ಯದ ಸುಮಾರು 6000 ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಸೌಲಭ್ಯ ಒದಗಿಸಲಾಗುವುದು ಎಂದರು. ಆರೋಗ್ಯ ಸಂಜೀವಿನಿ ಯೋಜನೆಯಡಿ ಪತ್ರಕರ್ತರು ಖಾಸಗಿ ಆಸ್ಪತ್ರೆಗಳಲ್ಲಿ 10 ಲಕ್ಷ ರೂ.ವರೆಗೆ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ. ಬಜೆಟ್ನಲ್ಲಿ ಸರ್ಕಾರ ಇದಕ್ಕಾಗಿ 6.5 ಕೋಟಿ ರೂ. ಮೀಸಲಿಟ್ಟಿದೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು. ಮಾಧ್ಯಮ ಮಾನ್ಯತಾ ಪತ್ರ ಹೊಂದಿರುವವರು ಮಾತ್ರ ಇದಕ್ಕೆ ಒಳಪಡುತ್ತಾರೆ ಎಂದು ತಿಳಿಸಿದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಮಾತನಾಡಿ, 2007ರಲ್ಲಿ ಸ್ಥಾಪನೆಯಾದ ವರದಿಗಾರರ ಕೂಟವು ಕಳೆದ 18 ವರ್ಷಗಳಿಂದ ಸ್ವಂತ ಜಾಗವಿಲ್ಲದೇ, ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಊರಿನ ಹೊರಗೆ ಸಿಎ ಸೈಟ್ ನೀಡಿದರೆ ಪ್ರಯೋಜನವಿಲ್ಲ. ಈಗಾಗಲೇ ಡಿಡಿಪಿಐ ಕಚೇರಿ ಬಳಿ ಪಾಲಿಕೆಯ ಒಂದು ಜಾಗ ನೋಡಿದ್ದು, ಅದನ್ನು ಕೊಡಿಸಿದರೆ ಉತ್ತಮ. ನಗರದ ಮಧ್ಯ ಭಾಗದಲ್ಲಿ ಇರುವುದರಿಂದ ಜನರಿಗೂ ಅನುಕೂಲವಾಗಲಿದೆ ಎಂದರು. ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಹಿರಿಯ ಪತ್ರಕರ್ತರಾದ ಮಂಜುನಾಥ ಗೌರಕ್ಕಳವರ್, ಮಲ್ಲಿಕಾರ್ಜುನ ಕಬ್ಬೂರು, ಕೂಟದ ಪದಾಧಿಕಾರಿಗಳು ಇದ್ದರು.