ದಾವಣಗೆರೆ : ಇಂದಿನ ಮಕ್ಕಳು ದೇಶವನ್ನು ರಕ್ಷಿಸುವ ನಾಗರಿಕರಾಗಿದ್ದು, ಪ್ರತಿಯೊಬ್ಬರೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಹೇಳಿದರು.
ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನುಬದ್ಧ ಮಕ್ಕಳ ದತ್ತು ಕಾರ್ಯಕ್ರಮ ಜಾಗೃತಿ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪರಿತ್ಯಕ್ತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾಲಕರು ಮಕ್ಕಳನ್ನು ಕಳೆದುಕೊಂಡಿರುವುದು. ಆಸ್ಪತ್ರೆಗಳಲ್ಲಿ ಜನಿಸಿದ ಮಗು ಗಂಡಹೆಂಡಿರ ಜಗಳ, ಹೆಣ್ಣುಮಗು ಮೊದಲಾದ ಕಾರಣಗಳಿಂದ ತಂದೆ, ತಾಯಿಗಳಿಗೆ ಬೇಡವಾಗುವುದರಿಂದ ಮಕ್ಕಳು ವಿವಿಧ ಸಂಸ್ಥೆ ಹಾಗೂ ಪ್ರಾಧಿಕಾರಗಳಲ್ಲಿ ಸೇರಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಅಲ್ಲದೇ ಇಂದು ಹಣ ಬೆಲೆ ಕಳೆದುಕೊಂಡಿದೆ. ಮಕ್ಕಳಿಲ್ಲ ಎನ್ನುವವರು ಎಷ್ಟು ಬೇಕಾದರೂ ದುಡ್ಡು ಕೊಡುತ್ತೇವೆ. ಒಂದು ಮಗುವನ್ನು ಕೊಡಿ ಎನ್ನುವ ಸಂದರ್ಭಗಳು ಬಹಳಷ್ಟಿವೆ. ಸಮಾಜದ ದುಷ್ಟ ವ್ಯಕ್ತಿಗಳು ಹಣದ ಆಸೆಗಾಗಿ ಮಕ್ಕಳನ್ನು ಮಾರಾಟ ಮಾಡುವುದು, ಇಲ್ಲವೇ ಸುಳ್ಳು ಭರವಸೆ ನೀಡಿ ಸರ್ಕಾರದ ನಿಯಮ ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಾರೆ. ಇದು ಆಗಬಾರದು ಎಂದರು. ಸರ್ಕಾರದ ಮಟ್ಟದಲ್ಲಿ ಮಕ್ಕಳನ್ನು ಯಾವ ರೀತಿ, ಯಾರಿಗೆ, ಹೇಗೆ ದತ್ತು ಕೊಡಬೇಕು ಎಂಬ ನೀತಿ ನಿಯಮ ಹಾಗೂ ಕಾನೂನುಗಳಿವೆ. ಈ ಕಾನೂನುಗಳನ್ನು ಉಲ್ಲಂಘಿಸಿ ಯಾರಾದರೂ ಮಗುವನ್ನು ದತ್ತು ಕೊಡುವುದು, ತೆಗೆದುಕೊಳ್ಳುವುದು ಹಾಗೂ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಎಲ್ಲ ಪರಿತ್ಯಕ್ತ ಮಕ್ಕಳನ್ನು ರಕ್ಷಿಸುವ ಜತೆಗೆ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಒಂದು ತಿಂಗಳ ಕಾಲ ದತ್ತು ಕಾರ್ಯಕ್ರಮದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಬಾಲ ನ್ಯಾಯ ಕಾಯ್ದೆ 2015ರ, ತಿದ್ದುಪಡಿ ಕಾಯ್ದೆ 2021ರ ಹಾಗೂ ದತ್ತು ಅಧಿನಿಯಮ 2022ರ ಅನ್ವಯ ಕಾನೂನುಬದ್ಧ ದತ್ತುವನ್ನು ಎಲ್ಲರೂ ಪ್ರೋತ್ಸಾಹಿಸುವ ಹಾಗೂ ಸಾರ್ವಜನಿಕವಾಗಿ ಕಂಡುಬರುವ ಅನಾಥ ಮತ್ತು ಪರಿತ್ಯಕ್ತ ಮಗುವನ್ನು ಕದ್ದುಮುಚ್ಚಿ ಸಾಕುವವರಿಗೆ ಕಾನೂನಿನ ಮಾರ್ಗದರ್ಶನ ನೀಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಪಾಲನಾ ಕೇಂದ್ರಗಳ ಸಹಯೋಗದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಎಡಿಸಿ ಪಿ.ಎನ್.ಲೋಕೇಶ್, ಎಎಸ್‌ಪಿ ವಿಜಯಕುಮಾರ್ ಎಂ. ಸಂತೋಷ್ ಮತ್ತಿತರೆ ಅಧಿಕಾರಿಗಳು ಇದ್ದರು. ----