ಜಿಲ್ಲೆ

ಜಲಜೀವನ್ ಮಿಷನ್ ಯೋಜನೆ ಕಳಪೆ ಕಾಮಗಾರಿ

ರಮೇಶ ಜಹಗೀರದಾರ್

ದಾವಣಗೆರೆ : ಮಾಯಕೊಂಡ ಕ್ಷೇತ್ರದ ನಲ್ಕುದುರೆ ಸೇರಿ ವಿವಿಧ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಹಾಗೂ ಸರ್ಕಾರಿ ಮಾದರಿ ಶಾಲೆ ಕೊಠಡಿಗಳು ಕಳಪೆಯಿಂದ ಕೂಡಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳ ತನಿಖೆ ನಡೆಸಿ ವರದಿ ನೀಡಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು.
 ಕ್ಷೇತ್ರದ ನಲ್ಕುದುರೆ ಗ್ರಾಮದ ಶ್ರೀ ವೀರಭದ್ರೇಶ್ವರ ಸಾರ್ವಜನಿಕ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆ ಹಾಗೂ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ನಲ್ಕುದುರೆ ಗ್ರಾಪಂ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್‌ಗೆ 10 ರೂ. ಹಾಗೂ 1 ಕೆಜಿ ಅಕ್ಕಿ ಕಡಿತಗೊಳಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಕೇಳಿ ಬಂದ ದೂರಿಗೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕರು, ಜನರಿಗೆ ವಂಚಿಸುತ್ತಿರುವ ನ್ಯಾಯಬೆಲೆ ಅಂಗಡಿಯನ್ನು ಕೂಡಲೇ ಅಮಾನತುಗೊಳಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಆಹಾರ ಇಲಾಖಾಧಿಕಾರಿಗೆ ಸೂಚನೆ ನೀಡಿದರು.
 ಪಿಡಬ್ಲುೃಡಿ ಹಾಗೂ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಕ್ಷೇತ್ರದಲ್ಲಿ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಸರಿಯಾಗಿ ಕಾರ್ಯನಿರ್ವಹಿಸುವುದಾದರೆ ಇಲ್ಲಿ ಇರಬಹುದು. ಇಲ್ಲದಿದ್ದರೆ ನಿಮ್ಮ ದಾರಿ ನೋಡಿಕೊಳ್ಳಿ ಎಂದು ಹೇಳಿದರು.
 ಕ್ಷೇತ್ರದಲ್ಲಿ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಕೂಡಲೇ ವರದಿ ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗೆ ಸೂಚಿಸಿದರಲ್ಲದೆ, ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ ಎಂಬ ದೂರುಗಳು ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕು ಎಂದರು.
 ಜನತಾದರ್ಶನದಲ್ಲಿ 28 ಸಾಮಾಜಿಕ ಭದ್ರತಾ ಫಲಾನುಭವಿಗಳಿಗೆ ಆದೇಶದ ಪ್ರತಿ ವಿತರಿಸಲಾಯಿತು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು.
 ಚನ್ನಗಿರಿ ತಹಸೀಲ್ದಾರ್ ಎರ‌್ರಿಸ್ವಾಮಿ, ತಾಪಂ ಇಒ ಬಿ.ಕೆ. ಉತ್ತಮ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ಪಿಡಬ್ಲ್ಯೂಡಿ ಎಇಇ ರವಿಕುಮಾರ್, ತಾಲೂಕು ವಿಸ್ತರಾಣಾಧಿಕಾರಿ ರವಿಕುಮಾರ್ ಅಥರ್ಗಾ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಮಲ್ಲಿಕಾರ್ಜುನ್, ಬಿಇಒ ಜಯ್ಯಪ್ಪ, ಎಇ ಅಶೋಕ್, ಗ್ರಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷೆ ಆಶಾ, ಪಿಡಿಒ ಸುರೇಶ್ ಇದ್ದರು.