ದಾವಣಗೆರೆ: ಬರುವ ಆಗಸ್ಟ್ 15ರ ಒಳಗೆ ದಾವಣಗೆರೆ ಜನತೆಗೆ ಜಲಸಿರಿ ಯೋಜನೆಯಡಿ 247 ನೀರು ಪೂರೈಕೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್ ಸುರೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದ ನಗರಾಭಿವೃದ್ಧಿ ಸಚಿವರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಪ್ರಸ್ತಾಪಕ್ಕೆ ಉಭಯ ಸಚಿವರು ನೀರು ಪೂರೈಕೆಯ ಭರವಸೆ ನೀಡಿದರು.
ಸಭೆಯ ಆರಂಭದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಜಲಸಿರಿ ಯೋಜನೆ ಆರಂಭವಾಗಿ 7 ವರ್ಷ ಕಳೆದರೂ ಇದುವರೆಗೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಕಳೆದ ಬಾರಿ ನಗರದಲ್ಲಿ ನಡೆದ ಸಭೆಯಲ್ಲಿ ಜುಲೈನಲ್ಲಿ ನೀರು ಪೂರೈಸುವ ಭರವಸೆ ನೀಡಲಾಗಿತ್ತು. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಆಕ್ಷೇಪ ಎತ್ತಿ ಜಲಸಿರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಅಧಿಕಾರಿಗಳು ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಕೊನೆಗೆ ಆಗಸ್ಟ್ 15ರಂದು ದಾವಣಗೆರೆ ಜನತೆಗೆ 247 ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ ನಗರದ ಕುಡಿಯುವ ನೀರಿನ ಸಲುವಾಗಿ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಭೂ ಮಾಲೀಕರಿಗೆ ಬಾಕಿ 4 ಕೋಟಿ ರೂ. ಪರಿಹಾರ ಪಾವತಿ, ಕಾಮಗಾರಿ ಬೆಲೆ ಏರಿಕೆ ವೆಚ್ಚ ಹಾಗೂ ಬಾಕಿ ಇರುವ ಕಾಮಗಾರಿ ಮೊತ್ತ 20 ಕೋಟಿ ರೂ. ಸೇರಿ ಒಟ್ಟು 24 ಕೋಟಿ ರೂ. ಪಾವತಿಸಲು ಅನುದಾನ ನೀಡುವಂತೆ ಮಲ್ಲಿಕಾರ್ಜುನ್ ಅವರು ಬಿ.ಎಸ್.ಸುರೇಶ್ ಅವರಲ್ಲಿ ಪ್ರಸ್ತಾಪ ಮಾಡಿದಾಗ ಭೂ ಮಾಲೀಕರಿಗೆ ಬಾಕಿ 4 ಕೋಟಿ ರೂ.ಗಳನ್ನು ಮಹಾನಗರ ಪಾಲಿಕೆಯಿಂದಲೇ ನೀಡುವಂತೆ ಸೂಚಿಸಿ 20 ಕೋಟಿ ಹಣವನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯ ಲೋಕಿಕೆರೆ- ಬುದ್ಧ ಬಸವ ಭೀಮ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅನುಮೋದನೆ ನೀಡಿ ಎಸ್.ಎಫ್.ಸಿ. ವಿಶೇಷ ಅನುದಾನದಡಿ 261.00 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ಬಜೆಟ್ ನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 50-50 ಮಾದರಿಯಲ್ಲಿ ಸುಸಜ್ಜಿತ ಕಸಾಯಿಖಾನೆ ನಿರ್ಮಿಸಲು ಪಾಲಿಕೆ ವ್ಯಾಪ್ತಿಯ 3 ವಲಯ ಕಚೇರಿಗಳಲ್ಲಿ ಕಂಪ್ಯೂಟರೀಕೃತ ಇ-ಖಾತಾ ನೀಡಲು ಸಹಾಯವಾಗುವಂತೆ ಗಣಕೀಕರಣಗೊಳಿಸಲು ಹಾಗೂ ಪಾಲಿಕೆ ಕಟ್ಟಡದಲ್ಲಿ ಸುಸಜ್ಜಿತ ದಾಖಲೆ ಕೊಠಡಿ ನಿರ್ಮಾಣ ಹಾಗೂ ಕಂಪ್ಯೂಟರೀಕೃತ ದಾಖಲೆಗಳನ್ನು ವಿತರಿಸಲು ವ್ಯವಸ್ಥೆ ಕಲ್ಪಿಸಲು ಅನುದಾನ ಬಿಡುಗಡೆಗೆ ಸಚಿವರು ಒಪ್ಪಿಗೆ ಸೂಚಿಸಿದರು.
ದಾವಣಗೆರೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಹಾಲಿ ಬೀದಿ ದೀಪಗಳನ್ನು ತೆರವುಗೊಳಿಸಿ, ಹೊಸದಾಗಿ ಎಲ್‌ಇಡಿ, ಬೀದಿ ದೀಪಗಳನ್ನು ಪಿಪಿಪಿ ಮಾದರಿಯಲ್ಲಿ ಕೈಗೊಂಡಿದ್ದು, ಹೆಚ್ಚುವರಿಯಾಗಿ 15,000 ದೀಪಗಳನ್ನು ಅಳವಡಿಸಲು ಹೆಚ್ಚುವರಿಯಾಗಿ ರೂ.8 ಕೋಟಿ ಅನುದಾನ ಬಿಡುಗಡೆಗೂ ಒಪ್ಪಿಗೆ ನೀಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 300 ಕೋಟಿ ರೂ. ಅನುದಾನ ಮತ್ತು ನಗರದ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ಎಸ್.ಎಫ್.ಸಿ. ಯೋಜನೆಯಡಿ 100 ಕೋಟಿ ರೂ. ವಿಶೇಷ ಅನುದಾನ ಹಾಗೂ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ 100 ಕೋಟಿ ರೂ.ಗಳನ್ನು ಬಜೆಟ್ ನಂತರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರು ತಿಳಿಸಿದರು.
ನಗರದ ಅವೈಜ್ಞಾನಿಕ ಕಾಮಗಾರಿ, ಯೋಜನೆಗಳ ವಿನ್ಯಾಸ ಬದಲಾಯಿಸಲು ಸಹ ಸಭೆಯಲ್ಲಿ ಚರ್ಚೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳು, ಅಣಬೇರು ರಾಜಣ್ಣ, ದಿನೇಶ್ ಕೆ.ಶೆಟ್ಟಿ, ಇಂಧೂದರ್ ಇದ್ದರು.