ರಮೇಶ ಜಹಗೀರದಾರ್ ದಾವಣಗೆರೆ : ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿ ಶತಮಾನವನ್ನು ದಾಟಿರುವ ಜಿಲ್ಲಾ ಕಾರಾಗೃಹವನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಜೈಲು ಅಧಿಕಾರಿಗಳು ಹೆಜ್ಜೆ ಇಟ್ಟಿದ್ದಾರೆ. ಹಳೆಯ ಕಳಂಕಗಳನ್ನು ಅಳಿಸಿ ಹಾಕಿ ಬದಲಾವಣೆ ತರುವ ಸಂಕಲ್ಪ ತೊಟ್ಟಿದ್ದಾರೆ. ನಗರದ ವಸಂತ ರಸ್ತೆಯಲ್ಲಿರುವ ಕಾರಾಗೃಹ 1902 ರಲ್ಲಿ ಸ್ಥಾಪನೆಯಾಯಿತು. ಅದು ಸ್ವಾತಂತ್ರೃ ಪೂರ್ವದ ಕಾಲ. ಹಲವಾರು ಸ್ವಾತಂತ್ರೃ ಹೋರಾಟಗಾರರನ್ನು ಈ ಜೈಲಿನಲ್ಲಿ ಇಡಲಾಗಿತ್ತು ಎನ್ನುತ್ತದೆ ಇತಿಹಾಸ. ವಿಶೇಷ ಉಪ ಕಾರಾಗೃಹವಾಗಿದ್ದ ಈ ಜೈಲು 2017ರಲ್ಲಿ ಜಿಲ್ಲಾ ಕಾರಾಗೃಹವಾಯಿತು. ಒಂದು ಕಡೆ ರೈಲು ನಿಲ್ದಾಣ, ಮತ್ತೊಂದು ಕಡೆ ಪೊಲೀಸ್ ಠಾಣೆ, ಸುತ್ತಲೂ ಮಾರುಕಟ್ಟೆ. ಇಂಥ ಜನ ನಿಬಿಡ ಪ್ರದೇಶದಲ್ಲಿ ಈ ಕಾರಾಗೃಹ ನೆಲೆಗೊಂಡಿದೆ. 2266 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು ಕೈದಿಗಳಿಗಾಗಿ 9 ಕೊಠಡಿಗಳಿವೆ. 170 ಕೈದಿಗಳನ್ನಿಡುವ ಸಾಮರ್ಥ್ಯವಿದ್ದು ಈಗ 168 ಮಂದಿ ಕೈದಿಗಳಿದ್ದಾರೆ. ಅವರಲ್ಲಿ ಶೇ. 90 ರಷ್ಟು ವಿಚಾರಣಾಧೀನ ಇದ್ದಾರೆ. 6 ತಿಂಗಳ ವರೆಗೆ ಶಿಕ್ಷೆಯಾದವರು ಬೆರಳೆಣಿಕೆಯಷ್ಟು ಇದ್ದಾರೆ. ಜೈಲಿನ ಗ್ರಂಥಾಲಯದಲ್ಲಿ 4 ಸಾವಿರ ಪುಸ್ತಕಗಳಿವೆ. ಕೆಲ ತಿಂಗಳಿಂದ ಅದು ಬಳಕೆಯಾಗಿರಲಿಲ್ಲ. ಈಗ ಮತ್ತೆ ಗ್ರಂಥಾಲಯದ ಬಾಗಿಲು ತೆರೆದಿದೆ. 18 ರಿಂದ 20 ದಿನಪತ್ರಿಕೆ, ಮಾಸ ಪತ್ರಿಕೆಗಳು ಬರುತ್ತವೆ. ಹೆಚ್ಚುವರಿಯಾಗಿ 4 ಸಾವಿರ ಪುಸ್ತಕಗಳನ್ನು ಒದಗಿಸುವಂತೆ ಗ್ರಂಥಾಲಯ ಇಲಾಖೆಗೆ ಬರೆಯಲಾಗಿದೆ. ಜತೆಗೆ ಅಗತ್ಯ ಪೀಠೋಪಕರಣಗಳ ವ್ಯವಸ್ಥೆಯೂ ಆಗಬೇಕಿದೆ ಎನ್ನುತ್ತಾರೆ ಕಾರಾಗೃಹದ ಅಧಿಕಾರಿ. ... * ಗಾಂಜಾ ಸಿಕ್ಕಿತ್ತು ಕೆಲ ತಿಂಗಳ ಹಿಂದೆ ಕಾರಾಗೃಹದಲ್ಲಿ ಗಾಂಜಾ ಪತ್ತೆಯಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. 5 ಜನ ಸಿಬ್ಬಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿಂದೆ ಬೀಡಿ, ಸಿಗರೇಟು, ತಂಬಾಕು ಚೀಟಿ ಇತ್ಯಾದಿಗಳನ್ನು ಹೊರಗಿನಿಂದ ಜೈಲಿನೊಳಗೆ ಎಸೆದ ಉದಾಹರಣೆಗಳಿವೆ. ಅದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜೈಲಿನ ಆವರಣಕ್ಕೆ ನೆಟ್ ಅಳವಡಿಸುವ ಚಿಂತನೆಯನ್ನು ಜೈಲು ಅಧಿಕಾರಿಗಳು ಮಾಡುತ್ತಿದ್ದಾರೆ. ಹೊರಗಿನಿಂದ ಯಾವುದೇ ಪದಾರ್ಥ ಎಸೆದರೂ ಅದು ಆ ನೆಟ್ ಒಳಗೆ ಬಂದು ಬೀಳುವುದರಿಂದ ಕೈದಿಗಳ ಕೈಗೆ ಸಿಗದಂತೆ ತಡೆಯಬಹುದು ಎಂಬುದು ಉದ್ದೇಶ. ... * ಹೊಸ ಜೈಲು ನಿರ್ಮಾಣ ಯಾವಾಗ? ಹೊಸ ಕಾರಾಗೃಹ ನಿರ್ಮಾಣಕ್ಕೆ ತುರ್ಚಗಟ್ಟ ಗ್ರಾಮದ ಬಳಿ 10 ಎಕರೆ ಜಾಗವನ್ನು ಜಿಲ್ಲಾಡಳಿತ ನೀಡಿದ್ದು ಇಲಾಖೆಗೆ ಹಸ್ತಾಂತರವಾಗಿದೆ. ಸುತ್ತಲೂ ಫೆನ್ಸಿಂಗ್ ಮಾಡಿದ್ದು ಬಿಟ್ಟರೆ ಯಾವುದೇ ಪ್ರಗತಿಯಾಗಿಲ್ಲ. ಹೊಸ ಜೈಲ್ ನಿರ್ಮಾಣಕ್ಕೆ 65 ಕೋಟಿ ರೂ.ಗಳ ಯೋಜನೆಯಿದೆ. ಪೊಲೀಸ್ ವಸತಿ ನಿಗಮಕ್ಕೆ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ. ಉದ್ದೇಶಿತ ಕಾರಾಗೃಹದಲ್ಲಿ 500 ಕೈದಿಗಳಿಗೆ ಅವಕಾಶ ಇರಲಿದೆ. ಆದರೆ ಮುಖ್ಯವಾಗಿ ಅನುದಾನ ಬಿಡುಗಡೆಯಾಗಬೇಕಿದೆ. ... * ಕ್ಯಾಮರಾ ಕಣ್ಗಾವಲು ಜೈಲು ಆವರಣದಲ್ಲಿ 16 ಸಿಸಿ ಕ್ಯಾಮರಾಗಳಿವೆ. 14 ಬಾಡಿ ವೋರ್ನ್ ಕ್ಯಾಮರಾಗಳಿವೆ. ಗೋಡೆಯ ಸುತ್ತಲೂ ಗಸ್ತು ಹೊಡೆಯಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗೋಡೆಗಳ ಮೇಲ್ಭಾದಲ್ಲಿ ಬ್ಲೇಡ್ ಲೇಸರ್‌ಗಳನ್ನು ಅಳವಡಿಸಲಾಗಿದೆ. ಕೈದಿಗಳನ್ನು ವಿಡಿಯೋ ಕಾನ್‌ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಪ್ರತ್ಯೇಕ ಕೊಠಡಿ ಇದೆ. ... (ಕೋಟ್) ವ್ಯಸನಮುಕ್ತ ಕಾರಾಗೃಹ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಕೈದಿಗಳ ಮನ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ, ಯೋಗ, ಧ್ಯಾನ ಮಾಡಿಸಲಾಗುತ್ತಿದೆ. ಕಾನೂನು ಅರಿವು, ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜತೆಗೆ ಸಿಬ್ಬಂದಿಯಲ್ಲಿ ಶಿಸ್ತು ಮೂಡಿಸಲಾಗುತ್ತಿದೆ. ಕೈದಿಗಳ ಅಹವಾಲು ಆಲಿಸಿ ಸ್ಪಂದಿಸಲಾಗುತ್ತಿದೆ. ಹೊಸ ಕಾರಾಗೃಹ ನಿರ್ಮಾಣ ನಮ್ಮ ಮುಂದಿರುವ ಆದ್ಯತೆಯಾಗಿದೆ. ಆನಂದ ಸಿ. ಭಜಂತ್ರಿ, ಕಾರಾಗೃಹ ಅಧೀಕ್ಷಕ (ಮಗ್‌ಶಾಟ್) ... * ಕೈದಿಗಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮುದ್ದೆ ಊಟ * ವಾರದಲ್ಲಿ ಒಮ್ಮೆ ನಾನ್‌ವೆಜ್, ಮೊಟ್ಟೆ, ಬಾಳೆಹಣ್ಣು * ಶುದ್ಧ ಕುಡಿಯುವ ನೀರಿನ ವ್ಯವಸ್ಥೆ * ಪ್ರತಿ ದಿನ ವೈದ್ಯರ ಭೇಟಿ ...