ಜಿಲ್ಲೆ

ಸೌಭಾಗ್ಯ  ಬೀಳಗಿ ಮಠ ಹೇಳಿಕೆ  ಸಂಹವನ ಕಾರ್ಯಕ್ರಮ

ರಮೇಶ ಜಹಗೀರದಾರ್

ದಾವಣಗೆರೆ : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಮಯ ಪಾಲನೆ, ವಿಷಯಗಳ ಗ್ರಹಿಕೆ ಹಾಗೂ ಓದಿದ್ದರ ಪುನರ್ಮನನ ಮಾಡುವುದು ಅವಶ್ಯ ಎಂದು  ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ 101ನೇ ರ‌್ಯಾಂಕ್ ವಿಜೇತೆ ಸೌಭಾಗ್ಯ  ಬೀಳಗಿಮಠ ಹೇಳಿದರು.                  ನಗರ ಕೇಂದ್ರ ಗ್ರಂಥಾಲಯದ ಸಿಲ್ವರ್ ಜುಬಿಲಿ ರೀಡಿಂಗ್ ರೂಮ್ ಆವರಣದ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.  ವಿದ್ಯಾರ್ಥಿಗಳು ದೇಶ, ವಿದೇಶಗಳ ವಿದ್ಯಮಾನ, ಅದರಿಂದ ನಮ್ಮ ದೇಶದ ಸಾಮಾಜಿಕ, ಆರ್ಥಿಕ, ಔದ್ಯಮಿಕ, ಆಡಳಿತಾತ್ಮಕ, ನೈಸರ್ಗಿಕ ಮುಂತಾದವುಗಳ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತಿರಬೇಕು, ಇದಕ್ಕಾಗಿ ಹೆಚ್ಚು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳುವವರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಹಾಗೆಯೇ ವಿಷಯ ಪ್ರಸ್ತುತಿ ಹಾಗೂ ಉತ್ತರ ನೀಡುವಲ್ಲಿ ಸತ್ಯವನ್ನೇ ಹೇಳಬೇಕು ಎಂದು ತಮ್ಮ ಅನುಭವ ಹಂಚಿಕೊಂಡರು.                  ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ್ ಮಾತನಾಡಿ, ನಾಡಿನ ನೆಲ, ಜಲ ಹಾಗೂ ಆಡಳಿತಾತ್ಮಕ  ವಿಚಾರವಾಗಿ ನಾಡಿಗೆ ನ್ಯಾಯ ದೊರಕಬೇಕೆಂದರೆ ಉನ್ನತ ಅಧಿಕಾರಿಗಳು ಮೂಲತಃ ಅಪ್ಪಟ ಕನ್ನಡಿಗರೇ ಆಗಿರಬೇಕು ಎಂದರು.  ರಾಜ್ಯದ ವಿದ್ಯಾರ್ಥಿಗಳು ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಕೈಗೊಂಡು ಉನ್ನತ ಹುದ್ದೆಗಳನ್ನು ಪಡೆಯಬೇಕು. ಓದುವ ಹವ್ಯಾಸ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಂಡಲ್ಲಿ ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ಕಷ್ಟಕರವಲ್ಲ  ಎಂದು ಹೇಳಿದರು.  ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಸೌಭಾಗ್ಯ ಬೀಳಗಿಮಠ ಅವರ ತಂದೆ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಶರಣಯ್ಯ ಬೀಳಗಿ ಮಠ, ಸಿಬ್ಬಂದಿಗಳಾದ ಬಿ.ಇ.ಮಹಾಸ್ವಾಮಿ, ಕೆ. ಗೋಪಾಲ್, ಸಂಗಣ್ಣ ಬೆಳಗಲ್ಲ, ಮಂಜುನಾಥ ಎಸ್. ಬಗರಿ, ಎಂ.ಆರ್.ಪರಶುರಾಮಪ್ಪ ಇದ್ದರು.