ಜಿಲ್ಲೆ

'ದಾವಣಗೆರೆ ವಿಜನ್ ಐಟಿ’ಗೆ ಉದ್ಯಮಿಗಳ ಬಲ

ರಮೇಶ ಜಹಗೀರದಾರ್

ದಾವಣಗೆರೆ :  ‘ದಾವಣಗೆರೆ ವಿಜನ್ ಐಟಿ’ ಸಾಕಾರಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯೋಜಿತವಾಗಿ ಒಂದೊಂದೇ ಹೆಜ್ಜೆಗಳನ್ನು ಮುಂದಿಡುತ್ತಿದೆ. ಅದರ ಭಾಗವಾಗಿ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಉದ್ಯಮಿಗಳೊಂದಿಗೆ ಮಹತ್ವದ ಸಭೆ ನಡೆಯಿತು.  ಜಿಲ್ಲೆಗೆ ಕೈಗಾರಿಕೆಗಳನ್ನು ಆಕರ್ಷಿಸುವುದು ಮತ್ತು ಉದ್ಯಮಗಳ ಅಭಿವೃದ್ಧಿಯಲ್ಲಿ ಎದುರಾಗುವ ಅಡಚಣೆಗಳನ್ನು ದೂರ ಮಾಡುವುದು, ಉದ್ಯೋಗ ಸೃಷ್ಟಿ ಹಾಗೂ ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಯೋಜನೆ ರೂಪಿಸುವುದು ಸಭೆಯ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಸಾಫ್ಟ್‌ವೇರ್ ಹಾಗೂ ಇನ್ನಿತರ ಕ್ಷೇತ್ರದ ಕೈಗಾರಿಕೋದ್ಯಮಿಗಳಿಂದ ಸಲಹೆಗಳನ್ನು ಪಡೆಯಲಾಯಿತು.  ಆರಂಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಇದುವರೆಗೆ ನಡೆದಿರುವ ಪ್ರಯತ್ನಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.  ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್‌ಟಿಪಿಐ) ವಿಸ್ತರಿಸುವ ಕ್ರಮವಾಗಿ 4 ಜಾಗಗಳನ್ನು ಗುರುತಿಸಲಾಗಿದೆ. ಉದ್ಯಮ ಸ್ಥಾಪಿಸುವ ಕಂಪನಿಗಳಿಗೆ ಅನುಕೂಲ ಕಲ್ಪಿಸಲು ಡೇಟಾ ಸೆಂಟರ್ ಸ್ಥಾಪನೆಯಾಗಲಿದೆ. ದಾವಣಗೆರೆ ನಗರಕ್ಕೆ ಸೀಮಿತವಾಗದೇ ಗ್ರಾಮೀಣ ಭಾಗದಲ್ಲಿ ಯಾರಾದರೂ ಕೈಜೋಡಿಸಲು ಆಸಕ್ತಿ ತೋರಿಸಿದರೆ ಅದಕ್ಕೂ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.  ‘ಬ್ರಾೃಂಡ್ ದಾವಣಗೆರೆ’ಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ನವೆಂಬರ್ ತಿಂಗಳಲ್ಲಿ ದಾವಣಗೆರೆಯಲ್ಲಿ ಮೆಗಾ ಇವೆಂಟ್ ಮಾಡಲಾಗುವುದು. ರೋಡ್ ಶೋ ನಡೆಸುವ ಚಿಂತನೆಯೂ ಇದೆ. ಜಿಲ್ಲೆಗೆ 200 ಉದ್ಯಮಗಳನ್ನು ತರುವ ಗುರಿ ಇದೆ. ಜಿಲ್ಲಾಡಳಿತ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.  ಉದ್ಯಮಗಳ ಚಟುವಟಿಕೆ ಸುಗಮವಾಗಿ ಮುಂದುವರಿಯಲು ವಿದ್ಯುತ್ ಸರಬರಾಜು ಬಹಳ ಮುಖ್ಯ. ಅದಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 110 ಕೆವಿ ಸ್ಟೇಷನ್ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.  ಕೆರೆಬಿಳಚಿಯ ಯುವ ಉದ್ಯಮಿ ಸೋಹಿಲ್ ಅಹಮದ್ ಖಾನ್ ಸೇರಿ ಅನೇಕ ಉದ್ಯಮಿಗಳು ಮಾತನಾಡಿ ಜಿಲ್ಲಾಡಳಿತಕ್ಕೆ ಅನೇಕ ಸಲಹೆಗಳನ್ನು ನೀಡಿದರು.  ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ, ಜವಳಿ ಮತ್ತು ಕೈಮಗ್ಗ ಇಲಾಖೆ ಉಪ ನಿರ್ದೇಶಕ ಶಿವಕುಮಾರ ಕುಂಬಾರ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಮಡಳಿ ಅಧಿಕಾರಿ ರಾಜಶೇಖರ, ಕೌಶಲಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಮಲ್ಲಾಡದ, ವಿಜನ್ ಗ್ರೂಪ್‌ನ ವೀರೇಶ್ ಪಟೇಲ್, ಡಾ.ಎಚ್.ಬಿ. ಅರವಿಂದ್, ಡಾ. ಎನ್.ಸಿ. ಪ್ರಶಾಂತ್, ವಿನಯ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.