ಜಿಲ್ಲೆ

ಸ್ವದೇಶಿ ಮಂತ್ರದಿಂದಲೇ ಸದೃಢ ಭಾರತ

Davanagere

ದಾವಣಗೆರೆ: ಸ್ವದೇಶಿ ಮಂತ್ರದಿಂದ ಮಾತ್ರವೇ ಭಾರತ ಸದೃಢ ಹಾಗೂ ಸ್ವಾಭಿಮಾನಿ ರಾಷ್ಟ್ರವಾಗಲು ಸಾಧ್ಯ ಎಂದು ಎಬಿವಿಪಿಯ ಹಿರಿಯ ಕಾರ್ಯಕರ್ತ ಬಸವರಾಜ ಗುಬ್ಬಿ ಹೇಳಿದರು.

ನಗರದ ಜಯದೇವ ವೃತ್ತದಲ್ಲಿ ಶನಿವಾರ ಸಂಜೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನಗರ ಘಟಕ ಹಮ್ಮಿಕೊಂಡಿದ್ದ ಆತ್ಮನಿರ್ಭರ ಭಾರತ ಮತ್ತು ಸಮೃದ್ಧ ಭಾರತ ಅಭಿಯಾನದಲ್ಲಿ ಮಾತನಾಡಿದರು.

ದೇಶಭಕ್ತ ಭಾರತೀಯರು, ವ್ಯಾಪಾರಸ್ಥರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಸಾಮಗ್ರಿ ಖರೀದಿಸಿದಲ್ಲಿ ಆತ್ಮ ನಿರ್ಭರ ಭಾರತಕ್ಕೆ ನಿಜವಾದ ಅರ್ಥ ಬರಲಿದೆ. ಕುಂಬಾರರು, ನೇಕಾರರು, ಚಮ್ಮಾರರು, ದರ್ಜಿಗಳು, ಸಣ್ಣ ವ್ಯಾಪಾರಸ್ಥರು, ಹೋಲ್‌ಸೇಲ್ ವ್ಯಾಪಾರಿಗಳಲ್ಲಿ ವ್ಯಾಪಾರ ಮಾಡುವುದರಿಂದ ಸ್ವದೇಶಿ ಮಂತ್ರಕ್ಕೆ ಶಕ್ತಿ ಸಿಗಲಿದೆ. ರಾಷ್ಟ್ರದ ಕುಶಲಕರ್ಮಿಗಳಿಗೂ ಉದ್ಯೋಗ ಸಿಗಲಿದೆ ಎಂದರು.

ನಗರ ಘಟಕದ ಅಧ್ಯಕ್ಷ ಪವನ್ ರೇವಣಕರ್ ಮಾತನಾಡಿ, ಚೀನಾದ ಟಿಕ್‌ಟ್ಯಾಕ್ ಡಿಜಿಟಲ್ ಆ್ಯಪ್ ಒಂದರಿಂದಲೇ ವಾರ್ಷಿಕ 50 ಸಾವಿರ ಕೋಟಿ ಆದಾಯವನ್ನು ನಾವು ಚೀನಾಕ್ಕೆ ನೀಡುತ್ತಿದ್ದು, ಆ ಹಣ ನಮ್ಮ ದೇಶದ ಸೈನಿಕರ ಮೇಲೆ ಯುದ್ಧ ಮಾಡಲು ಚೀನಾ ಬಳಸುತ್ತಿದೆ. ಇನ್ನಾದರೂ ನಾವು ಸ್ವದೇಶಿತನ ಉಳಿಸಿಕೊಳ್ಳಬೇಕು ಎಂದರು.
ಅಭಿಯಾನದಲ್ಲಿ ‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಎಂಬ ಘೋಷಣೆ ಕೂಗಲಾಯಿತು. ನಗರ ಘಟಕದ ಕಾರ್ಯದರ್ಶಿ ಆಕಾಶ್ ಇಟಗಿ, ಕಾರ್ಯಕರ್ತರಾದ ಸುಮನ್, ವಿಜಯ್, ಪೃಥ್ವಿ, ಕಾರ್ತೀಕ್, ಮೋಹಿತ್ ಇತರರಿದ್ದರು.