ರಮೇಶ ಜಹಗೀರದಾರ್ ದಾವಣಗೆರೆ
ದಡಾರ ಮತ್ತು ರುಬೆಲ್ಲಾ ರೋಗಗಳನ್ನು ನಿರ್ಮೂಲನೆ ಮಾಡುವ ಸಂಕಲ್ಪದೊಂದಿಗೆ, 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ‘ತೀವ್ರತರವಾದ ಮಿಷನ್ ಇಂದ್ರಧನುಷ್’ ಅಭಿಯಾನಕ್ಕೆ ಆರೋಗ್ಯ ಇಲಾಖೆ ಸಜ್ಜಾಗಿದೆ.
ಆ. 7ರಿಂದ 12ರ ವರೆಗೆ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಒಂದು ಹಂತದ ತರಬೇತಿಯಾಗಿದೆ. ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಸೆ. 11ರಿಂದ 16ರ ವರೆಗೆ ಎರಡನೇ ಸುತ್ತು, ಅ. 9ರಿಂದ 14ರ ವರೆಗೆ ಮೂರನೇ ಸುತ್ತು ಹಮ್ಮಿಕೊಳ್ಳಲಾಗುವುದು.
ಜಿಲ್ಲೆಯಲ್ಲಿ 5 ವರ್ಷದೊಳಗಿನ 1.35 ಲಕ್ಷ ಮಕ್ಕಳಿದ್ದಾರೆ. ಅವರಲ್ಲಿ ಶೇ. 95ರಷ್ಟು ಲಸಿಕಾಕರಣ ಆಗಿದೆ. ಆದರೆ, ಅವರಲ್ಲಿ ನಿಗದಿತ ಸಮಯಕ್ಕೆ ಲಸಿಕೆ ಪಡೆಯದವರೂ ಇದ್ದಾರೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಲಸಿಕೆ ಹಾಕಿಸಲು ಆಗದ ಮಕ್ಕಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಇಂದ್ರಧನುಷ್‌ಗೆ ಚಾಲನೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ತಿಂಗಳಿಗೆ 2 ಸಾವಿರದಿಂದ 2500 ಮಕ್ಕಳ ಜನನವಾಗುತ್ತದೆ. ಜನವರಿಯಿಂದ ಇಲ್ಲಿವರೆಗೆ 188 ಸಂಶಯಾಸ್ಪದ ಪ್ರಕರಣಗಳ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು, ಅವುಗಳಲ್ಲಿ 12 ದಡಾರ ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚು. ರುಬೆಲ್ಲಾ ಇಲ್ಲವೇ ಇಲ್ಲ. ಜ್ವರ ಬರುವುದು, ಕೆಂಪು ಗಾದರಿ (ಅಮ್ಮ) ಕಾಣಿಸಿಕೊಳ್ಳುವುದು ಈ ರೋಗಗಳ ಲಕ್ಷಣವಾಗಿದೆ.
ಪ್ರತಿ ವರ್ಷ ಆಯ್ದ ಜಿಲ್ಲೆಗಳಲ್ಲಿ ಮಾತ್ರ ಇಂದ್ರಧನುಷ್ ಕಾರ್ಯಕ್ರಮ ಜಾರಿಯಾಗುತ್ತಿತ್ತು. ಕರೊನಾ ಅವಧಿಯಲ್ಲಿ 2 ವರ್ಷ ಕುಂಠಿತವಾಗಿದ್ದರಿಂದ ಈ ಬಾರಿ ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ದಡಾರ, ರುಬೆಲ್ಲಾ ಮಾತ್ರವಲ್ಲದೆ ವಯಸ್ಸಿಗೆ ಅನುಗುಣವಾಗಿ ನೀಡುವ ಎಲ್ಲ ಲಸಿಕೆಗಳನ್ನು ಮಕ್ಕಳು ಪಡೆದಿರಬೇಕು ಎಂಬುದು ಇಲಾಖೆಯ ಆಶಯವಾಗಿದೆ.
ಅಭಿಯಾನದ ಅಂಗವಾಗಿ ಆ. 7 ರಿಂದ 12ರ ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು, ಅಂಗನವಾಡಿ, ಕೆಲವೊಮ್ಮೆ ದೇವಸ್ಥಾನ ಆವರಣದಲ್ಲೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಬಾಕ್ಸ್..
ಯು-ವಿನ್ ಪೋರ್ಟಲ್
ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ, ಲಸಿಕೆಯಿಂದ ವಂಚಿತರಾದ ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಮಕ್ಕಳನ್ನು ಯು-ವಿನ್ ಪೋರ್ಟಲ್ ಮೂಲಕವೂ ನೋಂದಾಯಿಸಬಹುದು.
ಪೋರ್ಟಲ್‌ನಲ್ಲಿ ಮಕ್ಕಳ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಲಸಿಕೆ ಪಡೆದ ನಂತರ ಇ-ಸರ್ಟಿಫಿಕೇಟ್ ಪಡೆಯವುದಕ್ಕೂ ಅದರಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬಾಕ್ಸ್..
ಯಾವ ಯಾವ ಲಸಿಕೆ?
ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ವಯೋಮಾನಕ್ಕೆ ಅನುಗುಣವಾಗಿ ಹಲವು ಲಸಿಕೆಗಳನ್ನು ನೀಡಲಾಗುತ್ತದೆ.
ಅವುಗಳಲ್ಲಿ ಹೆಪಟೈಟಿಸ್-ಬಿ, ಒ.ಪಿ.ಒ, ಬಿ.ಸಿ.ಜಿ, ಪೆಂಟಾವೆಲೆಂಟ್, ರೋಟಾ, ದಡಾರ, ರುಬೆಲ್ಲಾ, ಜೆ.ಇ, ಡಿ.ಪಿ.ಟಿ, ವಿಟಮಿನ್-ಎ, ಟಿ.ಡಿ. ಇತ್ಯಾದಿ.
(ಕೋಟ್)
ಪಾಲಕರು ನಿರ್ಲಕ್ಷೃ ವಹಿಸಿದರೆ ದಡಾರ ರೋಗವು ಮಾರಣಾಂತಿಕವಾಗಬಹುದು. ಆದ್ದರಿಂದ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ನಿಗದಿತ ಸಮಯಕ್ಕೆ ಲಸಿಕೆ ಹಾಕಿಸಬೇಕು. ಈ ವಿಚಾರವಾಗಿ ಜನರು ಜಾಗೃತರಾಗಬೇಕು. ಅಮೃತ ಸಮಾನವಾದ ಲಸಿಕೆಗಳನ್ನು ಕಾಲ ಕಾಲಕ್ಕೆ ಕೊಡಿಸುವುದರಿಂದ ಮಕ್ಕಳನ್ನು 11 ಕಾಯಿಲೆಗಳಿಂದ ರಕ್ಷಿಸಬಹುದು. ಆರೋಗ್ಯ ಸಿಬ್ಬಂದಿ ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು.
ಡಾ.ಕೆ.ಎಸ್. ಮೀನಾಕ್ಷಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ.