ದಾವಣಗೆರೆ : ನಗುವಿನಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ನಗರದ ಎಸ್.ಎಸ್. ಬಡಾವಣೆ ಸ್ನೇಹಿತರ ಬಳಗದ ಉದ್ಘಾಟನೆ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಮಾತನಾಡಿದರು. ಇಂದಿನ ಒತ್ತಡದ ಬದುಕಿನಲ್ಲಿ ಹಾಸ್ಯಪ್ರಜ್ಞೆಯ ಅಗತ್ಯವಿದೆ. ಅನೇಕ ಸಂದರ್ಭಗಳಲ್ಲಿ ಅಹಂಕಾರ ಅಡ್ಡಿಯಾಗುತ್ತದೆ. ಅದನ್ನು ದೂರ ಸರಿಸಿ ನಗುವುದರಿಂದ ಸಂಬಂಧಗಳು ಉಳಿಯುತ್ತವೆ ಎಂದು ತಿಳಿಸಿದರು. ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿದರೆ ಅಪರಾಧಗಳನ್ನು ತಡೆಯಲು ಅನುಕೂಲವಾಗುತ್ತದೆ. ಹೊರ ವಲಯದ ಬಡಾವಣೆಗಳಲ್ಲಿ ಸರಗಳ್ಳತನ, ಮನೆಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಮನೆ ಮಾಲೀಕರು ಸಿಸಿ ಕ್ಯಾಮರಾ ಅಳವಡಿಸುವುದರಿಂದ ಅಪರಾಧ ಪತ್ತೆಗೆ ಸಹಾಯವಾಗುತ್ತದೆ. ಸಾರ್ವಜನಿಕರು ತೊಂದರೆಗೆ ಸಿಲುಕಿದಾಗ 112 ಗೆ ಕರೆ ಮಾಡುವಂತೆ ಮನವಿ ಮಾಡಿದರು. ಸೈಬರ್ ಕ್ರೈಮ್ ಹೆಚ್ಚಾಗುತ್ತಿವೆ. ಜನರು ವಂಚನೆಗೆ ಒಳಗಾಗಿ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ಡಿಜಿಟಲ್ ಅರೆಸ್ಟ್ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಒದಗಿಸಬಾರದು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಪರಿಸರ ಪ್ರೇಮಿ ಡಾ.ಶಾಂತಾ ಭಟ್ ಮಾತನಾಡಿ, ಬಡಾವಣೆಯನ್ನು ಮಾದರಿಯಾಗಿಸಲು ಎಲ್ಲರೂ ಸಂಘಟಿತ ಪ್ರಯತ್ನ ಮಾಡೋಣ. ಸೈನಿಕರಂತೆ ಬದ್ಧತೆ ಬೆಳೆಸಿಕೊಳ್ಳೋಣ ಎಂದರು. ಮತ್ತೊಬ್ಬ ಸನ್ಮಾನಿತ, ಕಲಾವಿದ ಆರ್.ಟಿ. ಅರುಣ್ ಕುಮಾರ್ ಮಾತನಾಡಿ, ಸ್ನೇಹಿತರ ಬಳಗದಿಂದ ಮುಂಬರುವ ದಿನಗಳಲ್ಲಿ ಆರೋಗ್ಯ ಶಿಬಿರ ಇನ್ನಿತರ ಒಳ್ಳೆ ಕಾರ್ಯಕ್ರಮ ಮಾಡೋಣ ಎಂದು ಹೇಳಿದರು. ತಹಸೀಲ್ದಾರ್ ಡಾ.ಎಂ.ಬಿ ಅಶ್ವಥ್, ಬಳಗದ ಅಧ್ಯಕ್ಷ ಆಂಜನೇಯ, ಕಾರ್ಯದರ್ಶಿ ಎಂ.ಎಸ್. ದೇವರಾಜ್ ಮಾತನಾಡಿದರು. ಶಿವನಳ್ಳಿ ರಮೇಶ್ ಸ್ವಾಗತಿಸಿದರು. ಟಿ. ನಾಗರಾಜ ವಂದಿಸಿದರು. ನಂತರ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಯಿತು.