ಜಿಲ್ಲೆ

ಅಪಘಾತವಾದಾಗ ಮರೆಯದಿರಿ ಮಾನವೀಯತೆ

ದಾವಣಗೆರೆ  ಅಪಘಾತ ಸಂಭವಿಸಿದಾಗ ವಿಡಿಯೋ ಮಾಡದೇ, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಪ್ರದರ್ಶಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಬ್ಯಾಂಕ್ ಸಬಾಪೂಜಿಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಸ್ತೆ ಸುರಕ್ಷತೆಗಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ಅಂಥ ದುರಂತದ ಸಂದರ್ಭದಲ್ಲಿ ಗಾಯಾಳುವಿನ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದು ಮೃಗತ್ವದ ಲಕ್ಷಣ. ಅದರ ಬದಲು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆಯಬೇಕು ಎಂದು ತಿಳಿಸಿದರು.  ಪ್ರತಿ ಶಾಲೆಯಲ್ಲಿ ಎಸ್‌ಎಆರ್‌ಎಸ್ ಸದಸ್ಯರು ಜವಾಬ್ದಾರಿಯುತವಾಗಿ ವರ್ತಿಸಬೇಕು. 18 ವರ್ಷ ತುಂಬುವ ಮೊದಲು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬಾರದು. ಪಾಲಕರೂ ಇದಕ್ಕೆ ಪ್ರೋತ್ಸಾಹ ನೀಡಬಾರದು. ಎಸ್‌ಎಆರ್‌ಎಸ್ ರೀತಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಹೇಳಿದರು.  ಎಸ್ಪಿ ಉಮಾ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, 1997ರಲ್ಲಿ ಬೆಂಗಳೂರಿನಲ್ಲಿ ಎಸ್‌ಎಆರ್‌ಎಸ್ ಕಾರ್ಯಕ್ರಮ ಆರಂಭವಾಗಿತ್ತು. ಐಜಿಪಿ ರವಿಕಾಂತೇಗೌಡ ಅವರ ಸೂಚನೆ ಮೇರೆಗೆ ನಗರದಲ್ಲೂ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ತಿಳಿಸಿದರು.  ವಿದ್ಯಾರ್ಥಿಗಳನ್ನು ರಸ್ತೆ ಸುರಕ್ಷತೆಯ ರಾಯಭಾರಿಗಳನ್ನಾಗಿ ಮಾಡುವುದು ಕಾರ್ಯಕ್ರಮದ ಉದ್ದೇಶ. ಈ ನಿಟ್ಟಿನಲ್ಲಿ 50 ಶಾಲೆಗಳನ್ನು ಗುರುತಿಸಲಾಗಿದೆ. ಪ್ರತಿ ಶಾಲೆಯಿಂದ 40 ಮಕ್ಕಳನ್ನು ಆಯ್ಕೆ ಮಾಡಿ, ಅವರನ್ನು ಟ್ರಾಫಿಕ್ ಜಂಕ್ಷನ್‌ಗಳ ಬಳಿ ಕರೆದೊಯ್ದು, ಸಂಚಾರ ನಿಯಮ, ರಸ್ತೆ ಸುರಕ್ಷತೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದರು.  ದಾವಣಗೆರೆ ಜಿಲ್ಲೆ ಒಂದರಲ್ಲೇ 2024ರಲ್ಲಿ 284 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟು, 1300 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿದ್ದಾರೆ. ಈ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮಕ್ಕಳಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.  ಹೆಚ್ಚುವರಿ ಎಸ್ಪಿ ಮಂಜುನಾಥ್, ಕೆಎಸ್‌ಆರ್‌ಟಿಸಿ ಡಿಸಿ ಕಿರಣ ಕುಮಾರ್ ಬಸಾಪುರ, ಡಿಡಿಪಿಐ ಜಿ. ಕೊಟ್ರೇಶ್, ಡಿವೈಎಸ್‌ಪಿಗಳಾದ ಪಿ.ಬಿ. ಪ್ರಕಾಶ್, ಶರಣಬಸವೇಶ್ವರ, ಸಂಚಾರ ಸಿಪಿಐ ಮಂಜುನಾಥ ನೆಲವಾಗಲು ಇತರರಿದ್ದರು.