ದಾವಣಗೆರೆ : ನಗರದ ಕೊಳೆಗೇರಿ ನಿವಾಸಿಗಳಿಗೆ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿಗಳಾಗಿವೆ ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಜಿಲ್ಲಾ ಸಮಿತಿ ಆರೋಪಿಸಿದೆ. ಸಮಿತಿಯ ಜಿಲ್ಲಾಧ್ಯಕ್ಷ ಬಿ. ನಿಂಗಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ನಗರದ ವಿವಿಧ ಕೊಳೆಗೇರಿಗಳ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಅಂಬೇಡ್ಕರ್ ನಿವಾಸ್ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಜತೆಗೆ ಸಮನ್ವಯಗೊಳಿಸಿ ಮನೆಗಳನ್ನು ಮಂಜೂರು ಮಾಡಲಾಗಿತ್ತು. ಮನೆ ನಿರ್ಮಿಸಲು ಸರ್ಕಾರ ನಿಗದಿಪಡಿಸಿದ ಸಮಯ ಮೀರಿ, 4 ವರ್ಷಗಳಾದರೂ ಪೂರ್ಣಗೊಳಿಸಿಲ್ಲ. ಕ್ಯೂರಿಂಗ್ ಮಾಡಿಲ್ಲ, ಬಣ್ಣ ಬಳಿಸಿಲ್ಲ, ವಿದ್ಯುತ್ ವೈರಿಂಗ್, ಫ್ಲೋರಿಂಗ್ ಮಾಡಿಲ್ಲ ಎಂದು ಕೊರತೆಗಳನ್ನು ಪಟ್ಟಿ ಮಾಡಿದರು. ಮನೆ ನಿರ್ಮಾಣವಾಗದ ಕಾರಣ ಫಲಾನುಭವಿಗಳು ಬಾಡಿಗೆ ಮನೆಗಳಲ್ಲಿ ವಾಸವಿದ್ದು ದುಬಾರಿ ಬಾಡಿಗೆ ಪಾವತಿಸುತ್ತಿದ್ದಾರೆ ಎಂದು ತಿಳಿಸಿದರು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ಲೋಪಗಳಿಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನುಭವಿ ಇಂಜಿನಿಯರುಗಳ ತಂಡದಿಂದ ಕಾಮಗಾರಿಗಳ ತನಿಖೆ ನಡೆಸಲು ಆದೇಶಿಸಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ನಾಗರಾಜ್, ಮೈಲಾರಪ್ಪ, ಶಾಂತಪ್ಪ, ಬಸವರಾಜ್, ರಾಜು, ಧನಂಜಯ, ಸುರೇಶ, ವಿಜಯ, ಮಾರುತಿ ಸುದ್ದಿಗೋಷ್ಠಿಯಲ್ಲಿದ್ದರು.