ಜಿಲ್ಲೆ

ಆಸ್ಪತ್ರೆ ಗುತ್ತಿಗೆ ನೌಕರರಿಗೆ ವೇತನ ವಂಚನೆ

ರಮೇಶ ಜಹಗೀರದಾರ್

ದಾವಣಗೆರೆ :  ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಗ್ರೂಪ್ ಡಿ ನೌಕರರಿಗೆ ವೇತನ ನೀಡಿಕೆಯಲ್ಲಿ ವಂಚನೆಯಾಗುತ್ತಿದೆ. ಬಾಕಿ ಸಂಬಳ ಪಾವತಿಸಲು ಲಂಚ ಪಡೆದ ಉಹರಣೆಯೂ ಇದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಆತಂಕ ವ್ಯಕ್ತಪಡಿಸಿದರು.  ಜಿಲ್ಲಾಡಳಿತ ಭವನದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಸರ್ಕಾರದಿಂದ ಬಿಡುಗಡೆಯಾಗುವ ಹಣ ಗುತ್ತಿಗೆ ನೌಕರರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಹೇಳಿದರು.  ಗುತ್ತಿಗೆ ನೌಕರರಿಗೆ ಸರ್ಕಾರದಿಂದ 18 ಸಾವಿರ ರೂ. ಬಿಡುಗಡೆಯಾಗುತ್ತಿದೆ. ಆದರೆ ಏಜೆನ್ಸಿಗಳ ಮೂಲಕ ಕೆಲಸಗಾರರಿಗೆ ಕೇವಲ 6 ರಿಂದ 8 ಸಾವಿರ ರೂ. ತಲುಪುತ್ತಿದೆ. ಅವರಿಗೆ ಬಡ್ಡಿ ಸಮೇತ ಹಣ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು.  ಜಗಳೂರು ತಾಲೂಕು ಆಸ್ಪತ್ರೆಯ ಗುತ್ತಿಗೆ ನೌಕರರಿಗೆ 3 ತಿಂಗಳಿಂದ ವೇತನ ಬಂದಿಲ್ಲ. ಬಾಕಿ ಸಂಬಳ ಪಡೆಯಲು ಆ ಬಡವರು ಲಂಚ ನೀಡಿದ್ದಾರೆ. ಆ ನೌಕರರು ನನ್ನ ಮುಂದೆ ಕಣ್ಣೀರು ಹಾಕಿದರು ಎಂದು ಜಿಲ್ಲಾಡಳಿತದ ಗಮನ ಸೆಳೆದರು.  ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಈ ಸಮಸ್ಯೆ ಬರುವುದಿಲ್ಲ. ‘ಕಾರ್ಮಿಕ ಅಧಿಕಾರಿಗಳು ನೀವೇನು ಮಾಡುತ್ತಿದ್ದೀರಿ, ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ. ಜಿಲ್ಲೆಯ ಎಲ್ಲ ಆಸ್ಪತ್ರೆಗಳ ಬಗ್ಗೆ ನನಗೆ ವರದಿ ನೀಡಿ’ ಎಂದು ಸೂಚನೆ ಕೊಟ್ಟರು.  ಪ್ರಭಾರ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ ಇದ್ದರು.  ...  (ಬಾಕ್ಸ್)  ಔಷಧ ಇದ್ದರೂ ಕೊಡುವುದಿಲ್ಲ  ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಔಷಧಗಳು ಲಭ್ಯವಿದ್ದರೂ ರೋಗಿಗಳಿಗೆ ನೀಡುವುದಿಲ್ಲ. ನಾನೇ ಹೋಗಿ ಚೀಟಿ ಕೊಟ್ಟು ನೋಡಿದೆ. ನನಗೂ ಅವರು ಔಷಧ ಇಲ್ಲವೆಂದೇ ಹೇಳಿದರು. ನನ್ನ ಜತೆ ನಿಂತಿದ್ದವರಿಗೂ ಅದೇ ಉತ್ತರ ದೊರೆಯಿತು. ಔಷಧಗಳನ್ನು ಹೊರಗಿನಿಂದ ತರಬೇಕಾದ ಸ್ಥಿತಿ ಅಲ್ಲಿದೆ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಆಯೋಗದ ಅಧ್ಯಕ್ಷೆ ಹೇಳಿದರು.  ಆಸ್ಪತ್ರೆಯ ನೀರಿನ ಟ್ಯಾಂಕ್‌ನಲ್ಲಿ ಹಲ್ಲಿ, ಹುಳ, ಕಸ ಇದೆ. ಪಾಚಿ ಕಟ್ಟಿದೆ. ಅದನ್ನು ನೋಡಿ ನನಗೆ ಗಾಬರಿಯಾಯಿತು. ನೀರಿನ ಗುಣಮಟ್ಟ ಈ ರೀತಿ ಇದ್ದರೆ ಅದನ್ನು ಬಳಸುವ ರೋಗಿಗಳ ಪಾಡೇನು ಎಂದು ಪ್ರಶ್ನಿಸಿದರು.  ಹೆರಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಸಿಂಕ್‌ನಲ್ಲಿ ನಲ್ಲಿಗಳಿಲ್ಲ. ಕನಿಷ್ಠ ಸ್ವಚ್ಛತೆಯನ್ನೂ ಕಾಪಾಡದಿದ್ದರೆ ಹೇಗೆ ಡಾಕ್ಟ್ರೇ. ಇದನ್ನೆಲ್ಲ ಸರಿಪಡಿಸಿ ಎಂದು ಸಿಜಿ ಆಸ್ಪತ್ರೆಯ ಜಿಲ್ಲಾ ಸರ್ಜನ್‌ಗೆ ತರಾಟೆಗೆ ತೆಗೆದುಕೊಂಡರು.  ...  (ಬಾಕ್ಸ್)  ಅಕ್ರಮ ಮದ್ಯ ಮಾರಾಟ ತಡೆಗಟ್ಟಿ  ಹಳ್ಳಿಗಳಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಅನೇಕ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಕುಡಿದು ಬರುವ ಗಂಡ ಪತ್ನಿಯ ಮೇಲೆ ಹಲ್ಲೆ ಮಾಡುವುದು ಸೇರಿದಂತೆ ಅನೇಕ ಅಪರಾಧಗಳು ಸಂಭವಿಸಲು ಇದು ಮೂಲ ಕಾರಣವಾಗಿದೆ ಎಂದು ನಾಗಲಕ್ಷ್ಮೀ ಚೌಧರಿ ಹೇಳಿದರು.  ಇದರಿಂದ ಭವಿಷ್ಯದ ಪೀಳಿಗೆಯ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಜಿಲ್ಲೆಯಲಿ ವ್ಯಾಪಕವಾಗಿರುವ ಈ ಪಿಡುಗನ್ನು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ನಿರ್ಮೂಲನೆ ಮಾಡಬೇಕು ಎಂದು ತಾಕೀತು ಮಾಡಿದರು.