ಜಿಲ್ಲೆ

ಗ್ರಾಮೀಣಾಭಿವೃದ್ಧಿಗೆ ಮೊದಲ ಆದ್ಯತೆ

ರಮೇಶ ಜಹಗೀರದಾರ್

ಮಾಯಕೊಂಡ : ಕ್ಷೇತ್ರದ ಜನರಿಗೆ ವಸತಿ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿ ಗ್ರಾಮೀಣಾಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.  ದಾವಣಗೆರೆ ತಾಲೂಕು ನರಗನಹಳ್ಳಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.  ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ, ಸರ್ಕಾರಿ ಶಾಲೆಗಳ ಕಟ್ಟಡ, ಕುಡಿಯುವ ನೀರಿನ ಪೂರೈಕೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಸೇರಿ ಸಮಗ್ರ ಮೂಲ ಸೌಕರ್ಯಗಳ ಅವಶ್ಯಕತೆ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೆ ಮನವಿ ಮಾಡಲಾಗುವುದು ಎಂದರು.  ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ಆಯುರ್ವೇದ  ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣವಾಗಲಿದ್ದು ಗುತ್ತಿಗೆದಾರರಿಂದ ಕಳಪೆ ಕಾಮಗಾರಿಯಾಗದಂತೆ ಇಲಾಖೆಯ ಇಂಜಿನಿಯರ್ ಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.  ಜಿಪಂ ಎಇಇ ಶಿವಮೂರ್ತಿ, ನರಗನಹಳ್ಳಿ ಗ್ರಾಮದ ಮುಖಂಡರಾದ ರುದ್ರೇಶ್, ಮೈಲಪ್ಪ, ಜಯಪ,್ಪ ಶಿವಣ್ಣ, ತಿಪ್ಪೇಸ್ವಾಮಿ, ಕಿರಣ್ ಕುಮಾರ್, ಹನುಮಂತಪ್ಪ, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.