ದಾವಣಗೆರೆ : ಚಿಗಟೇರಿ ಜಿಲ್ಲಾಸ್ಪತ್ರೆ ಕಾಯಕಲ್ಪಕ್ಕೆ 150 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಆಸ್ಪತ್ರೆ ಆವರಣದಲ್ಲಿ ಬುಧವಾರ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಸಂಪೂರ್ಣ ಹಳೆಯದಾಗಿದೆ. ಲಾಂಡ್ರಿ ವ್ಯವಸ್ಥೆ, ಸಿಬ್ಬಂದಿ ವಸತಿ ಗೃಹ, ನರ್ಸಿಂಗ್ ಕಾಲೇಜು ಸುವ್ಯವಸ್ಥಿತ ಶವಾಗಾರ, ಒಳಗೊಂಡು ಆಧುನಿಕ ಆಸ್ಪತ್ರೆ ನಿರ್ಮಿಸಬೇಕಿದೆ ಎಂದರು. ಸದ್ಯ ಆಸ್ಪತ್ರೆ ಅಭಿವೃದ್ಧಿಗೆ 17 ಕೋಟಿ ರೂ. ಜತೆಗೆ ಹೆಚ್ಚುವರಿ 6 ಕೋಟಿ ರೂ. ನೀಡಿದ್ದೇನೆ. ದುರಸ್ತಿ ಮಾಡುತ್ತ ಹೋದರೆ ದುಂದುವೆಚ್ಚ ಆಗಬಹುದು ಹೀಗಾಗಿ ಇದನ್ನು ಮರು ಪರಿಶೀಲಿಸಿ ಜಿಲ್ಲಾ ಸಚಿವರೊಂದಿಗೆ ಚರ್ಚಿಸಿ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬರುವ ಜನವರಿಗೆ ಎಂಆರ್‌ಐ ಸ್ಕಾೃನಿಂಗ್ ಯಂತ್ರ ನೀಡಲಾಗುವುದು. ಆಸ್ಪತ್ರೆ ಹಿಂಭಾಗ ರ‌್ಯಾಂಪ್ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಬರುವ ಬಜೆಟ್‌ನಲ್ಲಿ ಮಾಯಕೊಂಡಕ್ಕೆ ಸಮುದಾಯ ಆರೋಗ್ಯ ಕೇಂದ್ರ ಒದಗಿಸಲಾಗುವುದು ಎಂದರು. 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಬಂದಿದ್ದು ಅನುಮೋದನೆ ನೀಡಲಾಗುವುದು. ಟ್ರಾಮಾ ಸೆಂಟರ್‌ಗೂ ಅಗತ್ಯ ಸಲಕರಣೆ ಮತ್ತು ಸಿಬ್ಬಂದಿಗೆ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.