ದಾವಣಗೆರೆ : ದೇಶದ ಅಭಿವೃದ್ಧಿಗೆ ಪ್ರಜೆಗಳಲ್ಲಿ ರಾಷ್ಟ್ರಪ್ರೇಮ ಅವಶ್ಯಕವಾಗಿದ್ದು ಇದಕ್ಕೆ ಇತಿಹಾಸ ಜ್ಞಾನ ಪೂರಕವಾಗಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು. ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಜಿಲ್ಲಾ ಪದವಿಪೂರ್ವ ಕಾಲೇಜುಗಳ ಇತಿಹಾಸ ವೇದಿಕೆ ವತಿಯಿಂದ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ, ಪ್ರತಿಭಾ ಪುರಸ್ಕಾರ ಮತ್ತು ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಇತಿಹಾಸವೆಂದರೆ ಆಗಿ ಹೋದ ಘಟನೆಗಳ ದಾಖಲೆ ಅಷ್ಟೇ ಅಲ್ಲ, ಅದರೊಂದಿಗೆ ಸಮಾಜೋಪಯೋಗಿ ಮೌಲ್ಯಗಳ ನಿದರ್ಶನಗಳನ್ನೂ ಹೇಳಬೇಕು. ಅನೇಕ ಬಾರಿ ಪಠ್ಯಗಳಲ್ಲಿ ಇತಿಹಾಸ ತಿರುಚಲ್ಪಟ್ಟಿರುತ್ತದೆ. ನೈಜ ಇತಿಹಾಸ ಏನೆಂಬುದನ್ನು ಆ ವಿಷಯ ಪಾಠ ಮಾಡುವವರು ತಿಳಿದುಕೊಂಡಿರಬೇಕು ಎಂದರು. ಅವಕಾಶವಾದಲ್ಲಿ ಪಠ್ಯೇತರವಾಗಿ ಅದನ್ನು ಹೇಳುವುದರೊಂದಿಗೆ ಸ್ಥಳೀಯವಾದ ಐತಿಹಾಸಿಕ ಮಹತ್ವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತ ಹೋದಲ್ಲಿ ಪಾಠಗಳು ಆಕರ್ಷಣೀಯವಾಗುತ್ತವೆ. ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸುವುದಿಲ್ಲ ಎಂಬುದನ್ನು ನಿದರ್ಶನಗಳ ಸಹಿತ ವಿವರಿಸಿದರು. ಜಿಲ್ಲಾ ಇತಿಹಾಸ ವೇದಿಕೆ ಅಧ್ಯಕ್ಷ ಹಾಗೂ ಪ್ರಾಚಾರ್ಯ ಮಾಗನೂರು ಬಸವರಾಜ, ಜಿಲ್ಲಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘದ ಅಧ್ಯಕ್ಷ ಎನ್. ಓಹಿಲೇಶ್ವರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಬಿ. ಪಾಲಾಕ್ಷಿ, ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ಹಾಗೂ ಉಪನ್ಯಾಸಕ ಸಿ.ಬಿ. ರವಿ ಮಾತನಾಡಿದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಫರಜಾನ ಎಂ.ಎ. ಇದ್ದರು.