ಜಿಲ್ಲೆ

ಹಿಮೊಫಿಲಿಯಾ ನಿರ್ಮೂಲನೆಯತ್ತ ಹೆಜ್ಜೆ

ರಮೇಶ ಜಹಗೀರದಾರ್

ದಾವಣಗೆರೆ : ತಂತ್ರಜ್ಞಾನ ಬೆಳೆದಂತೆ ಚಿಕಿತ್ಸಾ ವಿಧಾನದಲ್ಲಿ ಸುಧಾರಣೆ ಆಗಿರುವುದರಿಂದ ಹಿಮೊಫಿಲಿಯಾ ರೋಗದ ನಿರ್ಮೂಲನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದೇವೆ ಎಂದು ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ.ಸುರೇಶ ಹನಗವಾಡಿ ಹೇಳಿದರು.  ನಗರದ ಜೆಜೆಎಂ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯಿಂದ ಗುರುವಾರ, ವಿಶ್ವ ಹಿಮೊಫಿಲಿಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ‘ಕುಸುಮ ರೋಗದ ಚಿಕಿತ್ಸಾ ವಿಧಾನದಲ್ಲಿ ಆಗಿರುವ ಸುಧಾರಣೆ’ ಕುರಿತು ಉಪನ್ಯಾಸ ನೀಡಿದರು.  ಜೀನ್ ಥೆರಪಿಯ ಮೂಲಕ ಇಂದಲ್ಲ ನಾಳೆ ರೋಗದ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.  ಸರ್ಕಾರ ಹಿಮೊಫಿಲಿಯಾ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಇನ್ನಷ್ಟು ಆಸಕ್ತಿ ವಹಿಸಿದರೆ (ಪ್ರೊಫೆಲ್ಯಾಕ್ಸಿಸ್‌ನಿಂದ) ರೋಗಿಗಳು ರಕ್ತಸ್ರಾವದ ತೊಂದರೆಯಿಂದ ಅಂತರ ಕಾಯ್ದುಕೊಳ್ಳಬಹುದು ಎಂದು ಸಲಹೆ ನೀಡಿದರು.  ಹಿಮೊಫಿಲಿಯಾದಿಂದ ಬಳಲುತ್ತಿರುವವರ ಸಂಖ್ಯೆ ವಿಶ್ವದಲ್ಲಿ ಅಂದಾಜು 4 ಲಕ್ಷ ಇರಬಹುದು. ಈ ಪೈಕಿ ಶೇ. 25ರಷ್ಟು ಕುಸುಮ ರೋಗಿಗಳು ಭಾರತದಲ್ಲೇ ಇದ್ದಾರೆ. ರಕ್ತಸ್ರಾವದಿಂದ ಉಂಟಾಗುವ ಹಿಮೊಫಿಲಿಯಾ ತೀರಾ ವಿರಳ ಕಾಯಿಲೆ. 5ರಿಂದ 10 ಸಾವಿರ ಜನರಲ್ಲಿ ಒಬ್ಬರಿಗೆ ಇದು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರೋಗ ಪತ್ತೆಯಲ್ಲಿ ಆಗುತ್ತಿರುವ ವಿಳಂಬದಿಂದ ತೊಂದರೆ ಉಂಟಾಗುತ್ತಿದೆ. ತ್ವರಿತ ರೋಗಪತ್ತೆ ಹಾಗೂ ಚಿಕಿತ್ಸೆಯಿಂದ ಅಂಗವೈಕಲ್ಯವನ್ನು ತಪ್ಪಿಸಬಹುದು ಎಂದು ಹೇಳಿದರು.  ಕುಸಮ ರೋಗದಿಂದ ಬಳಲುವವರು ಹಾಗೂ ಅವರ ಕುಟುಂಬದವರಿಗೆ ಅರಿವಿನ ಕೊರತೆ ಇದೆ. ಇದರಿಂದ ರೋಗಪೀಡಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯ ಇದೆ ಎಂದು ಕಳವಳ ವ್ಯಕ್ತಪಡಿಸಿದರು.