ಜಿಲ್ಲೆ

ವೃತ್ತಿಯ ಜತೆಗೆ ಇರಲಿ ಆರೋಗ್ಯ ಕಾಳಜಿ

ರಮೇಶ ಜಹಗೀರದಾರ್

ದಾವಣಗೆರೆ : ಆಟೋ ಚಾಲಕರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಎಸ್‌ಎಸ್ ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಪ್ರಭಾ ಮಲ್ಲಿಕಾರ್ಜುನ ಹೇಳಿದರು.
 ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಎಸ್‌ಎಸ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ, ಆಟೋ ಚಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
 ಪ್ರತಿ ದಿನ ನಡಿಗೆ, ವ್ಯಾಯಾಮ, ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಇರುವುದರಿಂದ   ಸ್ವಾಸ್ಥೃದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
 ಕ್ಯಾನ್ಸರ್ ಇರುವವರು ಕೊನೆಯ ಹಂತದಲ್ಲಿ ವೈದ್ಯರ ಬಳಿಗೆ ಬರುತ್ತಾರೆ. ಮುಂಚಿತವಾಗಿಯೇ ತಪಾಸಣೆ ಮಾಡಿಸಿಕೊಂಡರೆ ಮುಂದಾಗುವ ತೊಂದರೆಯನ್ನು ತಪ್ಪಿಸಬಹುದು. ಅದರಿಂದ ಆರ್ಥಿಕ ಉಳಿತಾಯವೂ ಆಗಲಿದೆ. ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಒತ್ತಡ ನಿರ್ವಹಿಸಿ ಆರೋಗ್ಯದ ಕಡೆ ಗಮನ ಹರಿಸಬೇಕು. ಆರೋಗ್ಯ ಉತ್ತಮವಾಗಿದ್ದರೆ ನಿಮ್ಮ ಕುಟುಂಬದ ಸ್ವಾಸ್ಥೃವೂ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
 ಆಟೋ ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು. ಶಿಬಿರದಲ್ಲಿ 200 ಕ್ಕೂ ಹೆಚ್ಚು ಆಟೋ ಚಾಲಕರು ತಪಾಸಣೆ ಮಾಡಿಸಿಕೊಂಡರು.
 ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ, ಡಾ. ಕುಮಾರ್, ಡಿವೈಎಸ್ಪಿಗಳಾದ ಬಿ.ಎಸ್. ಬಸವರಾಜ್, ಯಶವಂತ್, ಮಲ್ಲಮ್ಮ ಚೌಬೆ, ಇಮ್ರಾನ್ ಬೇಗ್, ಪಿಎಸ್‌ಐ ಶೈಲಜಾ ಇದ್ದರು. ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಸ್ವಾಗತಿಸಿದರು. ಸಂಚಾರ ಪೊಲೀಸ್ ನಿರೀಕ್ಷಕ ನಲವಾಗಲು ಮಂಜುನಾಥ್ ನಿರೂಪಿಸಿದರು.