ಜಿಲ್ಲೆ

ಅತಿಸಾರ ತಡೆಗೆ ಸ್ವಚ್ಛತೆ ಅಗತ್ಯ

ರಮೇಶ ಜಹಗೀರದಾರ್

ದಾವಣಗೆರೆ  : ಅತಿಸಾರ ಭೇದಿ ಗಂಭೀರವಾದ ಕಾಯಿಲೆ. ಅದರ ನಿಯಂತ್ರಣ ಮತ್ತು ತಡೆಯುವಿಕೆಗಾಗಿ ಸ್ವಚ್ಛತೆ, ಪರಿಸರ ಶುಚಿತ್ವಕ್ಕೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸಹಯೋಗದಲ್ಲಿ ಸೋಮವಾರ, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ‘ಅತಿಸಾರ ತಡೆಗಟ್ಟೋಣ, ಸ್ವಚ್ಛತೆ ಮತ್ತು ಒಆರ್‌ಎಸ್ ಮೇಲೆ ಇರಲಿ ಗಮನ’ ಎಂಬ ಘೋಷವಾಕ್ಯದೊಂದಿಗೆ ಅತಿಸಾರ ತಡೆಗಟ್ಟುವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.  ಅತಿಸಾರಕ್ಕೆ ಮುಖ್ಯ ಕಾರಣ ಸ್ವಚ್ಛತೆ ಇಲ್ಲದೇ ಇರುವುದೇ ಆಗಿದೆ. ನೊಣವಿಲ್ಲದ ಮನೆ ಯಾವಾಗಲೂ ಆರೋಗ್ಯದಿಂದ ಕೂಡಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮನೆಯ ಮುಂದಿನ ಚರಂಡಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿ ಬಂದು ಚರಂಡಿ ಸ್ವಚ್ಛಗೊಳಿಸಬೇಕೆಂದು ಕಾಯಬಾರದು. ಇದರಿಂದ ಸೊಳ್ಳೆ, ನೊಣ ಹೆಚ್ಚಾಗುತ್ತವೆ ಎಂದು ತಿಳಿಸಿದರು.  ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇ ಪದೇ ಅತಿಸಾರ ಭೇದಿ ಉಂಟಾಗುತ್ತದೆ. ಅದನ್ನು ತಡೆಯಲು ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ. ಊಟಕ್ಕಿಂತ ಮೊದಲು ಕಡ್ಡಾಯವಾಗಿ ಸಾಬೂನಿನಿಂದ ಕೈತೊಳೆಯಬೇಕು. ಶುಚಿತ್ವ ಇದ್ದರೆ ಬಹಳಷ್ಟು ಹಣ ಉಳಿತಾಯ ಮಾಡಿದಂತೆ ಆಗುತ್ತದೆ ಎಂದರು.  ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್ ಮಾತನಾಡಿ, ಬಿಸಿಯೂಟ ಸೇವಿಸಬೇಕು. ದಾರಿಯಲ್ಲಿ ಮಾರುವ ಪದಾರ್ಥಗಳನ್ನು ಸೇವಿಸಬಾರದು. ಡೆಂೆ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ಮೂಡಿಸಿ ಸುತ್ತಮುತ್ತಲಿನ ಪರಿಸರ ಶುಚಿತ್ವ ಕಾಪಾಡಬೇಕು. ಟೈರು, ತೆಂಗಿನ ಚಿಪ್ಪು, ಡಬ್ಬಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.  ಸೊಳ್ಳೆಗಳು ಉತ್ಪಾದನೆಯಾಗದಂತೆ ಗಮನಹರಿಸಬೇಕು. ಚರಂಡಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸುವುದು ಸಹ ಮುಖ್ಯವಾಗಿದೆ ಎಂದು ತಿಳಿಸಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನವು ಈಗಾಗಲೇ ಆರಂಭವಾಗಿದೆ. ಜುಲೈ 31ರವರೆಗೆ ಸಮುದಾಯ ಮತ್ತು ಗ್ರಾಮೀಣ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.  ಅತಿಸಾರ ಭೇದಿ ತಡೆಯುವಿಕೆ ಅಭಿಯಾನದಡಿ ಸಮುದಾಯ ಮತ್ತು ಗ್ರಾಮಮಟ್ಟದಲ್ಲಿ ಒಆರ್‌ಎಸ್ ಹಂಚುವುದು ಮತ್ತು ಅದನ್ನು ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು. ಇದೇ ವೇಳೆ ಅತಿಸಾರ ತಡೆಗಟ್ಟುವ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ, ಆರ್.ಸಿ.ಎಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಡಾ.ಮೃತ್ಯುಂಜಯ ಇದ್ದರು.