ದಾವಣಗೆರೆ : ಜಿಲ್ಲೆಯಲ್ಲಿ ಕ್ಷಯ ರೋಗದಿಂದಾಗಿ ಸಾವಿನ ಪ್ರಮಾಣ ಶೇ. 11 ರಿಂದ ಶೇ. 7ಕ್ಕೆ ಇಳಿಕೆಯಾಗಿದೆ ಎಂದು ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಣ ಪ್ರಮಾಣವನ್ನು ಶೇ. 5ಕ್ಕೆ ಇಳಿಸುವ ಗುರಿ ಇತ್ತು. ಗ್ರಾ.ಪಂ, ನಗರ ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು ಹಾಗೂ ಸಮುದಾಯದ ಸಂಘಟಿತ ಪ್ರಯತ್ನದ ಫಲವಾಗಿ ಶೇ. 7ಕ್ಕೆ ತಂದಿದ್ದೇವೆ. ಕೆಲ ಪ್ರಕರಣಗಳಲ್ಲಿ ರೋಗ ಕೊನೆಯ ಹಂತದಲ್ಲಿದ್ದಾಗ ಪತ್ತೆಯಾಗುತ್ತಿದೆ. ಆರಂಭದಲ್ಲೇ ಗುರುತಿಸಿದರೆ ಸಾವಿನ ಪ್ರಮಾಣ ಇನ್ನೂ ಇಳಿಕೆಯಾಗಲಿದೆ. ಇದಕ್ಕೆ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದರು. ಕ್ಷಯ ರೋಗ ನಿಮೂರ್ಲನೆ ಹಳ್ಳಿಗಳಿಂದ ಆಗಬೇಕು. ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಕ್ಷಯರೋಗ ಪತ್ತೆ, ಸೂಕ್ತ ಸಮಯದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು. ಕ್ಷಯ ಮುಕ್ತ 40 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಿಡಿಒ ಹಾಗೂ ವೈದ್ಯಾಧಿಕಾರಿಗಳಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ, ಡಾ. ಅಸ್ಮಾ ಬಾನು, ಡಾ. ಎಸ್.ಪಿ. ಮಧು, ಡಾ. ಯೋಗೇಂದ್ರ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ಡಾ. ಎಂ.ಕೆ. ರುದ್ರಸ್ವಾಮಿ, ಡಾ. ಸುರೇಶ್ ಬಾರ್ಕಿ ಇದ್ದರು. ... (ಬಾಕ್ಸ್) ಹೆದರಿಕೆ ಬೇಡ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಕ್ಷಯ ರೋಗದ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಬೇರೆ ಕಾಯಿಲೆಗಳಂತೆ ಕ್ಷಯವನ್ನೂ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದು ಹೇಳಿದರು. ಹಿಂದಿನ ದಿನಗಳಲ್ಲಿ ಕ್ಷಯಕ್ಕೆ ತುತ್ತಾದವರನ್ನು ನೋಡುವ ರೀತಿಯೇ ಬೇರೆ ಇತ್ತು. ಪರಿಸ್ಥಿತಿ ಈಗ ಬದಲಾಗಿದೆ. ವೈದ್ಯಕೀಯ ಕ್ಷೇತ್ರ ಬೆಳೆದಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಸುಧಾರಿತ ಔಷಧ, ಲಸಿಕೆಗಳು ಲಭ್ಯವಿದೆ. ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ರೋಗ ಲಕ್ಷಣ ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಹಾಗೂ ನಿಯಮಿತ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು ಎಂದರು. ಕ್ಷಯದ ಲಕ್ಷಣ ಹಸಿವು ಇಂಗುವುದು, ಸುಸ್ತು, ತೂಕ ಇಳಿಕೆ ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿದರೆ, ಮಾತ್ರೆಗಳ ಮೂಲಕವೇ ಮೂರರಿಂದ ಆರು ತಿಂಗಳೊಳಗೆ ಗುಣಪಡಿಸಬಹುದು. ರೋಗದ ಬಗ್ಗೆ ಅಲಕ್ಷ್ಯ ಸಲ್ಲದು. ಭಯ, ಸಂಕೋಚವಿಲ್ಲದೇ ಮುಕ್ತವಾಗಿ ನಿಯಮಿತ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಕ್ಷಯ ಮುಕ್ತ ಜಿಲ್ಲೆಯಾಗಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.