ದಾವಣಗೆರೆ : ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ 7 ತಿಂಗಳಲ್ಲಿ ಹೆರಿಗೆ ಸಮಯದಲ್ಲಿ 28 ತಾಯಂದಿರು ಮೃತಪಟ್ಟಿರುವುದು ಆತಂಕದ ವಿಷಯ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈ ಪೈಕಿ 23 ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ, 5 ತಾಯಂದಿರು ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾವು ಆಗಿರುವುದು ಕಳವಳಕಾರಿಯಾಗಿದೆ. ಇದರಲ್ಲಿ ನಿರ್ಲಕ್ಷೃ ಆಗಿರುವಂತೆ ಕಾಣುತ್ತಿದೆ. ಇಂಥ ಬೆಳವಣಿಗೆ ಆಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ವಿಶೇಷ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸೂಚನೆ ನೀಡಿದರು. ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ಕುರಿತು ಆಪ್ತ ಸಮಾಲೋಚನೆ ಮೂಲಕ ವೈದ್ಯರು ತಾಯಂದಿರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು, ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹೆರಿಗೆಗಳೇ ಹೆಚ್ಚಾಗುತ್ತಿವೆ. ಜಿಲ್ಲಾಧಿಕಾರಿ ಮಟ್ಟದಲ್ಲಿ ಖಾಸಗಿ ಆಸ್ಪತ್ರೆಯವರ ಸಭೆ ನಡೆಸಿ ಅವರಿಗೂ ತಿಳಿವಳಿಕೆ ನೀಡಬೇಕು. ರಾಜ್ಯಮಟ್ಟದಲ್ಲೂ ಈ ಬಗ್ಗೆ ಶಿಷ್ಟಾಚಾರ ರೂಪಿಸಲಾಗುವುದು ಎಂದರು. ಜಗಳೂರು ತಾಲೂಕು ಆಸ್ಪತ್ರೆಯ ಸ್ಥಿತಿ ಸರಿಯಾಗಿಲ್ಲ. ಹೊಸ ಕಟ್ಟಡ ನಿರ್ಮಿಸುವ ಅಗತ್ಯವಿದೆ ಎಂದು ಶಾಸಕ ದೇವೇಂದ್ರಪ್ಪ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ತಮ್ಮ ಗಮನದಲ್ಲೂ ಇದೆ. ಈ ಕುರಿತು ಸಿಎಂ ಜತೆಗೆ ಚರ್ಚಿಸುವುದಾಗಿ ತಿಳಿಸಿದರು. ರಾಮಗೊಂಡನ ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉತ್ತಮವಾಗಿದ್ದರೂ, ಕೋಟ್ಯಂತರ ರೂ. ವೆಚ್ಚ ಮಾಡಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯವಿರಲಿಲ್ಲ. ಅದರ ಬದಲು ನಿಜವಾಗಿಯೂ ಶಿಥಿಲವಾಗಿರುವ ಪಿಎಚ್‌ಸಿಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬಹುದು ಎಂದರು. ಇಲಾಖೆ ಆಯುಕ್ತ ಶಿವಕುಮಾರ್, ಆರೋಗ್ಯ ಅಭಿಯಾನ ನಿರ್ದೇಶಕ ಡಾ. ವೈ. ನವೀನ್ ಭಟ್, ಡಿಎಚ್‌ಒ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಇದ್ದರು. ... (ಬಾಕ್ಸ್) 132 ಕ್ಷಯ ರೋಗಿಗಳ ಸಾವು ಜಿಲ್ಲೆಯಲ್ಲಿ 132 ಕ್ಷಯ ರೋಗಿಗಳು ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲೇ ಅತಿಹೆಚ್ಚು ಸಂಖ್ಯೆಯಾಗಿದೆ ಎಂದು ಸಚಿವ ದಿನೇಶ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು. ಕೆಲವು ರೋಗಿಗಳು ಔಷಧಗಳನ್ನು ಸರಿಯಾಗಿ ಸೇವಿಸುತ್ತಿಲ್ಲ ಎಂಬುದು ಕಂಡುಬಂದಿದೆ ಎಂದು ಡಿಸಿ ಗಂಗಾಧರಸ್ವಾಮಿ ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ವರ್ಷ 16 ಗ್ರಾ.ಪಂ.ಗಳನ್ನು ಕ್ಷಯಮುಕ್ತ ಎಂದು ಘೋಷಿಸಲಾಗಿದೆ. ಈ ವರ್ಷ 32 ಗ್ರಾ.ಪಂ.ಗಳು ಆ ಸಾಲಿಗೆ ಸೇರಿವೆ ಎಂದು ಜಿ.ಪಂ. ಸಿಇಒ ಸುರೇಶ ಇಟ್ನಾಳ್ ಹೇಳಿದರು. ... (ಬಾಕ್ಸ್) ಹೆಣ್ಣು ಭ್ರೂಣಹತ್ಯೆ ತಪ್ಪಿಸಿ ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗಿದ್ದು ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದೆ. ಹೆಣ್ಣು ಭ್ರೂಣ ಹತ್ಯೆ ಇದಕ್ಕೆ ಕಾರಣವಿರಬಹುದು ಎಂದು ಸಚಿವ ದಿನೇಶ ಹೇಳಿದರು. ಅಧಿಕಾರಿಗಳು ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನಿಡುವುದರ ಜತೆಗೆ ಗುಪ್ತಚರ ಇಲಾಖೆಯ ರೀತಿ ಕೆಲಸ ಮಾಡಿ ಎಲ್ಲೆಲ್ಲಿ ಭ್ರೂಣಹತ್ಯೆ ನಡೆಯುತ್ತಿದೆ ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದರು. ಗರ್ಭಿಣಿಯರು ಆಸ್ಪತ್ರೆಗೆ ದಾಖಲಾದಾಗ ನೋಂದಣಿ ಮಾಡಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು. ... (ಬಾಕ್ಸ್) ಹುದ್ದೆಗಳ ನೇಮಕಾತಿಗೆ ಕ್ರಮ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಖಾಲಿ ಇರುವ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು. ‘ಡಿ’ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆಯಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ತಜ್ಞ ವೈದ್ಯರ (ಸ್ಪೆಷಲಿಸ್ಟ್‌ಗಳು) ವೇತನವನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ದೊರೆತರೆ ತಿಂಗಳಿಗೆ ಕನಿಷ್ಠ 1.45 ಲಕ್ಷ ರೂ.ಗಳಿಂದ ಆರಂಭವಾಗಿ ಅವರ ಅನುಭವದ ಆಧಾರದಲ್ಲಿ 2.10 ಲಕ್ಷ ರೂ. ವರೆಗೂ ಆಕರ್ಷಕ ಸಂಬಳ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಡೆಂೆ, ಚಿಕುನ್‌ಗುನ್ಯಾದಂಥ ಕೀಟಜನ್ಯ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಲು ಇನ್ನುಮುಂದೆ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ತಿಳಿಸಿದರು. ... (ಕೋಟ್) ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ತುರ್ತು ಸಂದರ್ಭಗಳಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಹೊರೆಯಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕೆ.ಎಸ್. ಬಸವಂತಪ್ಪ, ಮಾಯಕೊಂಡ ಶಾಸಕ