ಹರಿಹರ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯ ಎಂದು ಬಿಇಒ ಡಿ. ದುರುಗಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ದೊಗ್ಗಳ್ಳಿಯ ಪಿಎಂಶ್ರೀ ಶಾಲೆಯಲ್ಲಿ ಶುಕ್ರವಾರ ನಡೆದ ಆರೋಗ್ಯ ತಪಾಸಣೆ ಮತ್ತು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಬೆಳವಣಿಗೆಗೆ ಸದೃಢ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ ಯೋಜನೆ ಭಾಗವಾಗಿ ಪ್ರತಿ ಮಗುವಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು. ಮಕ್ಕಳ ದಿನಾಚರಣೆಯಂದೇ ಆರೋಗ್ಯ ತಪಾಸಣೆ ನಡೆಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರು ಮಕ್ಕಳ ದೈಹಿಕ ಆರೋಗ್ಯ ಮತ್ತು ಶೈಕ್ಷಣಿಕ ಪ್ರಗತಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದನ್ನು ನೆನಪಿಸಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಚಂದ್ರಪ್ಪ ಮಾತನಾಡಿ, ದೊಗ್ಗಳ್ಳಿ ಶಾಲೆಗೆ ಪಿಎಂಶ್ರೀ ಯೋಜನೆ ತಾಲೂಕಿನಲ್ಲೇ ಪ್ರಥಮವಾಗಿ ಲಭಿಸಿರುವುದು ಹೆಮ್ಮೆಯ ಸಂಗತಿ. ಈ ಯೋಜನೆಯಿಂದ ಮೂಲ ಸೌಲಭ್ಯಗಳು ದೊರಕುತ್ತಿದ್ದು, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅನುಕೂಲ ಆಗಿದೆ ಎಂದರು. ಮುಖ್ಯಶಿಕ್ಷಕ ಎಚ್. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ವೈದ್ಯರಾದ ವಿಶ್ವನಾಥ ಕುಂದಗೊಳ ಮಠ ಮತ್ತವರ ತಂಡ 170ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು. ಹಿರಿಯ ಶಿಕ್ಷಕರಾದ ಆರ್. ರುದ್ರಪ್ಪ, ಶಿಕ್ಷಕಿಯರಾದ ಕೆ. ಸುಶೀಲಮ್ಮ, ಸಬಿಯಾ ಪರ್ವಿನ್, ಬಿ.ಟಿ. ಶರತ್‌ಬಾಬು, ಪುಷ್ಪಾವತಿ, ಶಿಲ್ಪಾ ಹಾಗೂ ಶಾಲಾ ಸಿಬ್ಬಂದಿ ಇದ್ದರು. ಎಚ್‌ಆರ್‌ಆರ್16ಶಾಲೆ1: ಹರಿಹರ ತಾಲೂಕು ದೊಗ್ಗಳ್ಳಿಯ ಪಿಎಂಶ್ರೀ ಶಾಲೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಬಿಇಒ ಡಿ. ದುರುಗಪ್ಪ ಉದ್ಘಾಟಿಸಿದರು. ಎಚ್. ಚಂದ್ರಪ್ಪ, ವಿಶ್ವನಾಥ ಕುಂದಗೊಳ ಮಠ ಇತರರಿದ್ದರು.