ಜಿಲ್ಲೆ

ಪರಿಶುದ್ಧ ಆಲೋಚನೆಯಲ್ಲಿದೆ ಆನಂದದ ಸೆಲೆ

ರಮೇಶ ಜಹಗೀರದಾರ್

ದಾವಣಗೆರೆ : ಅಹಂಕಾರ, ಭ್ರಮೆ, ದುರಾಸೆ, ದ್ವೇಷ, ಹೊಟ್ಟೆಕಿಚ್ಚು ನಮ್ಮನ್ನು ಸದಾ ಕಾಡುವ ಮಹಾ ರೋಗಗಳಾಗಿದ್ದು, ಅವುಗಳನ್ನು ನಾವೇ ನಿವಾರಿಸಿಕೊಳ್ಳಬೇಕು ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.  ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ, ‘ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಮಹಾ ರೋಗಗಳು ಮತ್ತು ದಿವ್ಯ ಔಷಧಗಳು’ ವಿಷಯದ ಕುರಿತು ಮಾತನಾಡಿದರು.  ಈ ರೋಗಗಳಿಗೆ ಯಾವ ವೈದ್ಯರೂ ಪರಿಹಾರ ನೀಡುವುದಿಲ್ಲ. ನಾವೇ ವೈದ್ಯರಾಗಿ, ಸತ್ಯ, ಸಮಚಿತ್ತ, ಪ್ರೀತಿ, ಏಕತೆ, ಎಚ್ಚರ ಮತ್ತು ವಿವೇಕವೆಂಬ ದಿವ್ಯ ಔಷಧಗಳಿಂದ ಅವುಗಳನ್ನು ನಿವಾರಿಸಿಕೊಳ್ಳಬೇಕು ಎಂದು ತಿಳಿಸಿದರು.  ಸಮಾಜದಲ್ಲಿ ವ್ಯಕ್ತಿಗಳ ನಡುವೆ, ಜಾತಿಗಳ ಮಧ್ಯೆ, ದೇಶಗಳ ನಡುವೆ ವಿಭಜನೆಗಳಿಂದ ದ್ವೇಷ ಉಂಟಾಗಿ ಕುಟುಂಬಗಳಲ್ಲಿ ಜಗಳಗಳು ಸಾಮಾನ್ಯವಾಗಿವೆ. ನಮ್ಮ ಅವನತಿಯನ್ನು ನಾವೇ ಮಾಡಿಕೊಳ್ಳುತ್ತಿದ್ದೇವೆ ಎಂದರು.  ಈಗ ನಾವೇನಾಗಿದ್ದೇವೆಯೋ ಅದೆಲ್ಲ ನಮ್ಮ ಆಲೋಚನೆಗಳ ಫಲಿತಾಂಶ. ದುಷ್ಟ ಆಲೋಚನೆ ಮಾಡಿದರೆ ನೋವು, ಕಷ್ಟಗಳು ಹಿಂಬಾಲಿಸುತ್ತವೆ. ಪರಿಶುದ್ಧ ಆಲೋಚನೆಯಲ್ಲಿದ್ದರೆ ಆನಂದವಾಗಿರುತ್ತೇವೆ. ಪ್ರೀತಿಯಿಂದ ದ್ವೇಷದ ನಾಶ ಸಾಧ್ಯ ಎಂದು ತಿಳಿಸಿದರು.  ಸಮಾಜ ದುಶ್ಚಟಗಳ ಹಾವಳಿಯಿಂದ ನಿರ್ನಾಮವಾಗುವುದನ್ನು ತಡೆದು, ಆನಂದ, ಆರೋಗ್ಯ, ಆತ್ಮವಿಶ್ವಾಸದ ಸುಂದರ, ಭವ್ಯ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಹಾಗೂ ಸರ್ಕಾರದ ಕರ್ತವ್ಯ ಎಂದು ಹೇಳಿದರು.  ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಕೌಜಲಗಿ, ಡಾ. ಸುರೇಶಬಾಬು, ಡಾ. ಮೃತ್ಯುಂಜಯ, ನರ್ಸಿಂಗ್ ವಿದ್ಯಾರ್ಥಿಗಳು, ಪಾಲಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.