ಹರಿಹರ: ನೆರೆ ರಾಜ್ಯದ ಗಡಿ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ಸೇರಲು ಉತ್ಸುಕರಾಗಿರುವುದರಿಂದ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು. ತಾಲೂಕು ರಾಷ್ಟ್ರೀಯ ಮತ್ತು ನಾಡಹಬ್ಬ ಆಚರಣಾ ಸಮಿತಿಯಿಂದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣೆ ವೇಳೆ ನೆರೆ ರಾಜ್ಯಗಳ ರಾಜಕಾರಣಿಗಳು ಕರ್ನಾಟಕದ ಕೆಲವು ಪ್ರದೇಶ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆಂದು ಭಾಷಣ ಮಾಡುತ್ತಾರೆ. ಆದರೆ, ಅದೇ ರಾಜ್ಯಗಳ ಕನ್ನಡ ಭಾಷಿಕರು ಕರ್ನಾಟಕದೊಂದಿಗೆ ವಿಲೀನರಾಗಲು ತುದಿಗಾಲಲ್ಲಿದ್ದಾರೆ ಎಂದರು. ಆಲೂರು ವೆಂಕಟರಾಯರ ನೇತೃತ್ವದಲ್ಲಿ 1904ರಲ್ಲಿ ಆರಂಭವಾದ ಕನ್ನಡ ನಾಡು ಕಟ್ಟುವ ಹೋರಾಟ ಅನೇಕ ಸಾಹಿತಿಗಳು, ಜನರ ಬೆಂಬಲ ಪಡೆದು, 1956ರಲ್ಲಿ ಮೈಸೂರು ರಾಜ್ಯವಾಗಿ ಜನ್ಮತಾಳಿತು. ನಂತರ 1973ರಲ್ಲಿ ಕರ್ನಾಟಕವೆಂದು ಕರೆಯಲ್ಪಟ್ಟಿತು. 1980-82ರಲ್ಲಿ ಡಾ.ರಾಜ್‌ಕುಮಾರ್ ಭಾಗವಹಿಸಿದ್ದ ಗೋಕಾಕ್ ಚಳವಳಿ ಪರಿಣಾಮವಾಗಿ ಕನ್ನಡ ಅಧಿಕೃತ ಭಾಷೆಯಾಯಿತು ಎಂದರು. ತಹಸೀಲ್ದಾರ್ ಕೆ.ಎಂ. ಗುರುಬಸವರಾಜ ಧ್ವಜಾರೋಹಣ ನೆರವೇರಿಸಿ, 2,000 ವರ್ಷಗಳ ಇತಿಹಾಸವಿರುವ, ಸುಂದರ ಭಾಷೆಯಾದ ಕನ್ನಡಕ್ಕೆ ವಿನೋಭಾ ಭಾವೆ ಲಿಪಿಗಳ ರಾಣಿ ಎಂದು ಕರೆದರು. ವರಕವಿ ಬೇಂದ್ರೆ ಭಾವನಾತ್ಮಕ ಕವನಗಳ ರಚನೆಗೆ ಕನ್ನಡ ಭಾಷೆಯೇ ಸೂಕ್ತ ಮತ್ತು ಹೃದಯಕ್ಕೆ ಹತ್ತಿರವಾದ ಭಾಷೆ ಎಂದು ಕೊಂಡಾಡಿದ್ದಾರೆ ಎಂದರು. ಬಿ.ಬಿ. ರೇವಣನಾಯ್ಕ ಉಪನ್ಯಾಸ ನೀಡಿ, ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಗ್ರೀಕ್‌ನ ರೋಮನ್, ಭಾರತದ ಸಂಸ್ಕೃತದ ನಂತರ 3ನೇ ಸ್ಥಾನ ಕನ್ನಡಕ್ಕಿದೆ ಎಂದರು. ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ಬಿಇಒ ಡಿ.ದುರುಗಪ್ಪ, ತಾಪಂ ಇಒ ಎಸ್.ಪಿ. ಸುಮಲತಾ, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಪಿಐ ಎಸ್. ದೇವಾನಂದ್, ಕೃಷಿ ಇಲಾಖೆಯ ಎ.ನಾರನಗೌಡ, ತೋಟಗಾರಿಕೆ ಇಲಾಖೆಯ ಶಶಿಧರಯ್ಯ, ಪಶುಸಂಗೋಪನ ಇಲಾಖೆಯ ಸಿದ್ದೇಶ್, ಟಿಎಚ್‌ಒ ಡಾ. ಅಬ್ದುಲ್ ಖಾದರ್, ಸಿಡಿಪಿಒ ಪೂರ್ಣಿಮಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಗಿರೀಶ್, ಕಂದಾಯ ಇಲಾಖೆಯ ಸಮೀರ್ ಅಹ್ಮದ್ ಇದ್ದರು.