ದಾವಣಗೆರೆ : ಜಿಲ್ಲೆಯಲ್ಲಿ ಬಸ್ ಸಂಚಾರ ಇಲ್ಲದಿರುವ ಗ್ರಾಮ ಹಾಗೂ ಅಗತ್ಯವಿರುವ ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಒದಗಿಸಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ತಾಕೀತು ಮಾಡಿದರು. ಜಿ.ಪಂ. ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಚನ್ನಗಿರಿ ತಾಲೂಕಿನ ಅಮ್ಮನಗುಡ್ಡ, ಕೆರೆಬಿಳಚಿ, ಹೊಸೂರು ಹೀಗೆ ಹಲವೆಡೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಇಲ್ಲದೇ ಇರುವ ಗ್ರಾಮಗಳನ್ನು ಗುರುತಿಸಿ ಸಾಧ್ಯವಿರುವ ಎಲ್ಲ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ ಕುಮಾರ್, ಬಸ್‌ಗಳ ಕೊರತೆ ಇದೆ, 51 ಬಸ್‌ಗಳ ಅವಶ್ಯಕತೆ ಇದೆ ಎಂದು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೂ ಇರುವ ಸಂಪನ್ಮೂಲ ಬಳಸಿಕೊಂಡು ಶಕ್ತಿ ಯೋಜನೆ ಆರಂಭವಾದಾಗಿನಿಂದ ಶೇ. 90ರಷ್ಟು ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸಲಾಗಿದೆ. ಅಗತ್ಯವಿರುವ ಮಾರ್ಗಗಳನ್ನು ಗುರುತಿಸಿ ಸಂಚಾರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠಲ ರಾವ್ ಮಾತನಾಡಿ, ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ವೇಳೆ ತೂಕ ಕಡಿಮೆ ಮಾಡಿ ವಿತರಣೆ ಮಾಡುವುದು ಕಂಡುಬಂದಲ್ಲಿ ನೇರವಾಗಿ ಇಲಾಖೆಗೆ ಮಾಹಿತಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತೂಕದ ಯಂತ್ರದ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು. ಬಸ್ ಕೊರತೆ ಇರುವ ಮಾರ್ಗಗಳನ್ನು ಗುರುತಿಸಿ, ಇರುವ ಸಂಪನ್ಮೂಲವನ್ನೇ ಬಳಸಿಕೊಂಡು ಅಗತ್ಯತೆಗೆ ಅನುಗುಣವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿಯ ಮುಂದಿನ ಸಭೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿ, ಮತ್ತಷ್ಟು ಜಾಗೃತಿ ಮೂಡಿಸಬೇಕು. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಮೂಲಕ ಮಾದರಿ ಜಿಲ್ಲೆಯನ್ನಾಗಿಸಬೇಕು ಎಂದರು. ಇದೇ ವೇಳೆ ಯುವನಿಧಿ ನೋಂದಣಿ ಅಭಿಯಾನದ ಕುರಿತ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಕೆ.ಎನ್. ಮಂಜುನಾಥ್, ನಂಜನಾಯ್ಕ, ರಾಜೇಶ್ವರಿ, ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ಯಾರಂಟಿ ಸಮಿತಿ ಸದಸ್ಯರು ಇದ್ದರು.