ದಾವಣಗೆರೆ : ಬದಲಾಗುತ್ತಿರುವ ಔದ್ಯಮಿಕ ಕ್ಷೇತ್ರದ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದಲ್ಲಿ ಉದ್ಯೋಗವಕಾಶಗಳು ಅರಸಿ ಬರುತ್ತವೆ ಎಂದು ಬೆಂಗಳೂರಿನ ಬ್ರಿಲ್ಲಿಯೊ ಕಂಪೆನಿಯ ವಿಶ್ವವಿದ್ಯಾಲಯ ಸಂಪರ್ಕ ಮುಖ್ಯಸ್ಥೆ ರಿತು ಶರ್ಮಾ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನಲ್ಲಿ ಶನಿವಾರ ಆಯೋಜಿಸಿದ್ದ, ಕಂಪ್ಯೂಟರ್ ಅಪ್ಲಿಕೇಶನ್ ವಿದ್ಯಾರ್ಥಿಗಳ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮ ಕ್ಷೇತ್ರದ ನಿರೀಕ್ಷೆಗಳಿಗೆ ತಕ್ಕಂತೆ ನಾವು ಬದಲಾಗಬೇಕು. ಕಂಪ್ಯೂಟರ್ ಜ್ಞಾನದ ಜತೆಗೆ ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ವಿನೂತನ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗದ ಬೇಡಿಕೆ ಕುಗ್ಗಿರಬಹುದು. ಈ ಹಂತದಲ್ಲಿ ಹೊಸ ವಿಚಾರಗಳನ್ನು ಕಲಿತರೆ ಅವು ನಮ್ಮ ಕೈ ಹಿಡಿಯುತ್ತವೆ ಎಂದು ಕಿವಿಮಾತು ಹೇಳಿದರು.
ಪದವಿ ಮುಗಿಸಿ ವೃತ್ತಿ ಜೀವನಕ್ಕೆ ಪ್ರವೇಶಿಸಿದ ನಂತರವೂ ಕಲಿಕೆಯ ಹಸಿವು ನಿರಂತರವಾಗಿರಬೇಕು. ಹೊಸದನ್ನು ಕಲಿಯುತ್ತ ಜ್ಞಾನದ ಮಟ್ಟವನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಇದರಿಂದ ನಮ್ಮ ಆತ್ಮವಿಶ್ವಾಸ ಜಾಸ್ತಿಯಾಗುವ ಜತೆಗೆ ಅವಕಾಶಗಳು ಹೆಚ್ಚಾಗುತ್ತವೆ. ನಮ್ಮ ಆಲೋಚನೆಗಳಲ್ಲೂ ಬದಲಾವಣೆಯಾಗುತ್ತದೆ ಎಂದರು.
ಪದವಿ ವರೆಗಿನ ಹಾದಿಯನ್ನು ಕ್ರಮಿಸಿದ್ದೀರಿ, ನಿಮ್ಮ ಪ್ರಯಾಣ ಈಗಷ್ಟೇ ಆರಂಭವಾಗಿದೆ. ಇದೇ ಚೈತನ್ಯ, ಕುತೂಹಲ ಮುಂದುವರಿಸಿಕೊಂಡು ಹೋಗಬೇಕು. ಗುರಿ ನಿಗದಿಪಡಿಸಿ ಅದನ್ನು ಸಾಧಿಸಬೇಕು. ಬದುಕಿನ ಪಯಣದಲ್ಲಿ ನಾವು ಬಯಸಿದ್ದೆಲ್ಲ ಸಿಗುವುದಿಲ್ಲ, ಕೆಲವು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಚಿಮ್ಮಿ ಬರುವ ಉತ್ಸಾಹ, ಸ್ಫೂರ್ತಿ ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಇದ್ದರೆ ಸಾಲದು, ಬದುಕಿನುದ್ದಕ್ಕೂ ಇರಬೇಕು. ಭವ್ಯ ಚಿತ್ರಗಳು ಸ್ಮೃತಿ ಪಟಲದಲ್ಲಿ ಬರುತ್ತಿರಬೇಕು. ಅದರ ಸಾಕಾರಕ್ಕೆ ತುಡಿಯಬೇಕು, ದುಡಿಯಬೇಕು. ಅದಕ್ಕಾಗಿ ಕಲಿಕೆಯ ದಾಹ ಯಾವತ್ತೂ ಇರಬೇಕು ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ತಿಳಿವಳಿಕೆ ಮತ್ತು ಅಳವಡಿಕೆಯಿಂದ ಪದವೀಧರರು ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯ. ಈ ಯುವಶಕ್ತಿ ವೈಯಕ್ತಿಕ, ಕೌಟುಂಬಿಕ ಹಿತಗಳಿಗೆ ಸೀಮಿತವಾಗದೆ ರಾಷ್ಟ್ರ ಮತ್ತು ವಿಶ್ವದ ಹಿತಕ್ಕೂ ಕಾರಣವಾಗಬೇಕು ಎಂದರು.
ಸಂಸ್ಥೆಯ ಚೇರ್ಮನ್ ಡಾ.ಅಥಣಿ ಎಸ್. ವೀರಣ್ಣ ಮಾತನಾಡಿ, ತೀವ್ರ ಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳ ತಿಳಿವಳಿಕೆ ಪಡೆಯದೆ ಪದವೀಧರರಿಗೆ ಭವಿಷ್ಯವಿಲ್ಲ ಎಂದರು. ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೀರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಎಂ.ವಿ. ವಾಗೀಶ್ ಸ್ವಾಗತ ಕೋರಿದರು. ಎಚ್. ನವೀನ್ ಹಾಗೂ ಎನ್. ಜ್ಯೋತಿ ಅತಿಥಿಗಳ ಪರಿಚಯ ಮಾಡಿದರು. ಪದವೀಧರರಿಗೆ ಪ್ರತಿಜ್ಞಾ ವಿಧಿಯನ್ನು ವಿಜಯ್ ಎನ್. ರಾವ್ ಬೋಧಿಸಿದರು. ಎಸ್. ವಿಂಧ್ಯಾ ಅತಿಥಿಗಳನ್ನು ಸನ್ಮಾನಿಸಿದರು. ಎಂ.ಎಸ್. ಪೂಜಾ ವಂದಿಸಿದರು. ಸುಹಾನಾ ಹಾಗೂ ಸೂಫಿಯಾನ್ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ಪ್ರಸಾದ್ ಪ್ರಾರ್ಥಿಸಿದರು.