ಜಿಲ್ಲೆ

ಮೂಲ ಚಿಂತನೆಯಿಂದ ದೂರವಾಗಿದ್ದೇವೆ

ರಮೇಶ ಜಹಗೀರದಾರ್

ದಾವಣಗೆರೆ :  ನಮ್ಮ ಮೂಲ ಚಿಂತನೆಯಿಂದ ದೂರ ಸರಿಯುತ್ತಿರುವ ಕಾರಣ ಸ್ವತ್ವವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.  ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4ನೇ ರಾಜ್ಯ ಅಧಿವೇಶನದಲ್ಲಿ ‘ನಮ್ಮ ಕಟ್ಟೆ-ನಮ್ಮ ಮಾತು’ ಎಂಬ ಗೋಷ್ಠಿಯಲ್ಲಿ ಮಾತನಾಡಿದರು.  ಸ್ವತ್ವಕ್ಕೆ ವಿಸ್ತಾರವಾದ ಆವರಣವಿದೆ. ಅದು ಬದುಕಿನ ಪ್ರತಿ ಘಟ್ಟದಲ್ಲೂ ಇದೆ. ನಾವು ಮೈಮರೆಯದೇ ಅದನ್ನು ಜತನದಿಂದ ಕಾಪಾಡಬೇಕು ಎಂದು ಅಭಿಪ್ರಾಯಪಟ್ಟರು.  ಧರ್ಮವೇ ಬೇರೆ, ರಿಲಿಜನ್ ಎಂಬ ಪದವೇ ಬೇರೆ. ರಿಲಿಜನ್ ಎಂದರೆ ಒಬ್ಬನೇ ದೇವರು, ಒಂದೇ ಪುಸ್ತಕ, ಒಬ್ಬನೇ ಪ್ರವಾದಿ ಎಂಬ ಅರ್ಥವಿದೆ. ಆದರೆ ಹಿಂದು ಧರ್ಮದಲ್ಲಿ 33 ಕೋಟಿ ದೇವರಿದ್ದಾರೆ ಎನ್ನುತ್ತೇವೆ. ಅವರವರ ಭಾವನೆಗೆ ತಕ್ಕಂತೆ ದೇವರನ್ನು ನೋಡುತ್ತೇವೆ. ಈ ಸ್ವಾತಂತ್ರೃ ಬೇರೆ ಧರ್ಮಗಳಲ್ಲಿ ಇಲ್ಲ ಎಂದು ತಿಳಿಸಿದರು.  ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಕ್ರಮವಾಗಿ ಪಾಲಿಸಿ ಕೊನೆಗೆ ಮೋಕ್ಷ ಇದೆ ಎಂದು ನಂಬುವವರು ಸ್ವತ್ವಕ್ಕೆ ಹತ್ತಿರವಾಗಿರುತ್ತಾರೆ. ಮೋಕ್ಷವೇ ಇಲ್ಲ ಎನ್ನುವವರು ಸ್ವತ್ವಕ್ಕೆ ದೂರವಾಗಿದ್ದಾರೆ ಎಂದು ವಿಶ್ಲೇಷಿಸಿದರು. ನಗರ ಜೀವನಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಈಗಲೂ ನಮ್ಮತನ ಉಳಿದಿದೆ ಎಂದು ಹೇಳಿದರು.  ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಳೆಯದನ್ನು ಮರೆಯುತ್ತಿದ್ದೇವೆ. ಹಿರಿಯರಿಗೆ ನಮಸ್ಕರಿಸುವ ಪದ್ಧತಿ ಕಡಿಮೆಯಾಗಿದೆ. ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಕೊಡುವುದಂತೂ ದೂರದ ಮಾತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.  ಮತ್ತೊಬ್ಬ ಹಾಸ್ಯ ಸಾಹಿತಿ ವೈ.ಎನ್. ಗುಂಡೂರಾವ್ ಮಾತನಾಡಿ, ಎಲ್ಲೆಲ್ಲೂ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿ. ಆದರೆ ಇತ್ತೀಚೆಗೆ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.  ಜಾನಪದ ಗಾಯಕ ಕಡಬಗೆರೆ ಮುನಿರಾಜು ಗೀತೆಗಳನ್ನು ಹಾಡುವ ಮೂಲಕ ಜಾನಪದದಲ್ಲಿರುವ ನಮ್ಮತನದ ಬಗ್ಗೆ ಹೇಳಿದರು. ಜನಪದರ ಭಾಷೆ, ಮಾತು, ನಡವಳಿಕೆಗಳಲ್ಲಿ ಸ್ವತ್ವ ಇದೆ ಎಂದರು.  ಸಂಸ್ಕೃತಿ ಚಿಂತಕಿ ರಾಧಾ ಶಾನುಭೋಗ್ ಮಾತನಾಡಿ, ನಾವು ಎಲ್ಲಿಯೇ ಹೋದರೂ ಸ್ವಂತಿಕೆ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.