ಜಿಲ್ಲೆ

ಬಗೆ ಬಗೆಯ ರೂಪದಲ್ಲಿ ಮೂಡಿ ಬರುವ ವಿನಾಯಕ

ರಮೇಶ ಜಹಗೀರದಾರ್

ಸುರೇಶ್ ಕೋಲ್ಕುಂಟೆ ದಾವಣಗೆರೆ
 ಭಾದ್ರಪದ ಮಾಸ ಸಮೀಪಿಸುತ್ತಿದ್ದು, ಆದಿಪೂಜಿತ ವಿನಾಯಕನ ಆರಾಧನೆಗೆ ಎಲ್ಲೆಡೆ ಭರದ ತಯಾರಿ ನಡೆದಿದೆ.
 ಗೌರಿ- ಗಣೇಶ ಹಬ್ಬಕ್ಕೆ ಮನೆಮನೆಗೆ ಬರಲು ಕಲಾವಿದರ ಕೈಚಳಕದಲ್ಲಿ ವೈವಿಧ್ಯಮಯ ರೂಪಗಳಲ್ಲಿ ಗಣಪತಿ ಮೂರ್ತಿಗಳು ಸಿದ್ಧಗೊಳ್ಳುತ್ತಿವೆ.
 ಸಿಂಹಾಸನಾರೂಢ ಗಣಪತಿಯಿಂದ ಹಿಡಿದು ಮೂಷಿಕ, ನಂದಿ, ಗಜರಾಜ, ಆದಿಶೇಷ, ನವಿಲು, ಗರುಡ, ಕಮಲದ ಮೇಲೆ ವಿರಾಜಮಾನವಾಗಿ ಕುಳಿತ ವಿಭಿನ್ನ ಹಾಗೂ ಆಕರ್ಷಕ ಸುಂದರ ಮೂರ್ತಿಗಳು ಸಿದ್ಧಗೊಂಡಿವೆ. ನೈಸರ್ಗಿಕ ಬಣ್ಣ ನೀಡುವ ಕಾರ್ಯವೂ ನಡೆದಿದೆ.
 ನಗರದ ಹೊಂಡದ ವೃತ್ತದ ಶ್ರೀ ದುರ್ಗಾಂಬಿಕಾ ದೇವಸ್ಥಾನ ರಸ್ತೆಯ ಚಿತ್ರಗಾರ ಗಲ್ಲಿಯಲ್ಲಿ ಸೋಮವಂಶ ಆರ್ಯ ಕ್ಷತ್ರಿಯ (ಚಿತ್ರಗಾರ) ಸಮಾಜದ 25ಕ್ಕೂ ಹೆಚ್ಚು ಕುಟುಂಬಗಳು ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿವೆ. ಸಾವಿರಾರು ಮೂರ್ತಿಗಳು ತಯಾರಾಗಿದ್ದು, ಮಹಿಳೆಯರೂ ಇದಕ್ಕೆ ಕೈ ಜೋಡಿಸಿರುವುದು ವಿಶೇಷ.
 ಯುಗಾದಿ ಹಬ್ಬದಿಂದ ಮೂರ್ತಿ ತಯಾರಿಕೆ ಕಾರ್ಯ ಆರಂಭಿಸಲಾಗುತ್ತದೆ. ಮನೆಯಲ್ಲಿ ಕೂರಿಸಲು ಸಣ್ಣ ಮೂರ್ತಿಗಳನ್ನೇ ಸಿದ್ಧಗೊಳಿಸುವುದು ಹೆಚ್ಚು. ಸುಮಾರು 1ರಿಂದ 5 ಅಡಿಯವರೆಗೆ ಎತ್ತರವಿರುತ್ತವೆ.
 ಚಿತ್ರಗಾರ ಗಲ್ಲಿಯಲ್ಲಿ ಯರಗುಂಟೆ ಸೀತಮ್ಮ ರಾಮಣ್ಣನವರ ಕುಟುಂಬ ಸುಮಾರು 70 ವರ್ಷಗಳಿಂದ ಗಣಪತಿ ಮೂರ್ತಿ ತಯರಿಸುತ್ತಿದೆ. ಸೀತಮ್ಮನವರ ನಂತರ ಅವರ ಸೊಸೆಯಂದಿರಾದ ಗೀತಾಬಾಯಿ, ಲೀಲಾಬಾಯಿ, ಯಮುನ, ಮೊಮ್ಮಕ್ಕಳಾದ ಕೆ.ಸಿ.ಕುಮಾರ್ ಹಾಗೂ ಶ್ರೀಧರ್ ಈ ಕಾಯಕವನ್ನು ಮುಂದುವರಿಸಿದ್ದಾರೆ.
 ಗಣಪತಿ ತಯಾರಿಕೆಗೆ ರಾಜನಹಳ್ಳಿಯಿಂದ ಶುದ್ಧ ಹೊಳೆ ಮಣ್ಣನ್ನು ತರಲಾಗುತ್ತದೆ. ಮೂರ್ತಿಗಳಿಗೆ ನೈಸರ್ಗಿಕ ವಾಟರ್ ಪೇಂಟ್ ಹಚ್ಚಲಾಗುತ್ತದೆ. ಒಂದು ಟ್ರಾೃಕ್ಟರ್ ಲೋಡ್ ಮಣ್ಣು ಹಾಗೂ ವಾಟರ್ ಪೇಂಟ್‌ಗೆ 10 ಸಾವಿರ ರೂ. ವೆಚ್ಚವಾಗುತ್ತದೆ ಎಂದು ಮೂರ್ತಿ ತಯಾರಕ ಶ್ರೀಧರ್ ಹೇಳುತ್ತಾರೆ.
 ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಮಾರಾಟದಿಂದ ಮಣ್ಣಿನ ಗಣಪತಿ ತಯಾರಕರಿಗೆ ತೊಂದರೆ ಆಗಲಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಮೂರ್ತಿ ತಯಾರಕರ ಒತ್ತಾಯ.
 ಮಣ್ಣಿನಿಂದ ತಯಾರಿಸಿದ ಗಣಪತಿಯೇ ಪೂಜೆಗೆ ಶ್ರೇಷ್ಠ. ಭಕ್ತರು ಇವುಗಳನ್ನೇ ಪೂಜೆಗೆ ಕೊಂಡೊಯ್ಯುತ್ತಾರೆ. ಇಂತಹ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕನಿಷ್ಠ 1 ಸಾವಿರದಿಂದ 8 ಸಾವಿರ ರೂ. ವರೆಗೆ ದರ ನಿಗದಿಪಡಿಸಲಾಗಿದೆ.
 
 --ಕೋಟ್--
 ಮನೆಗಳಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸಲು ಜಾಗ ಸಾಕಾಗುವುದಿಲ್ಲ. ಮೂರ್ತಿಗಳನ್ನು ತಯಾರಿಸುವ ಕುಟುಂಬಗಳಿಗೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ನಗರದಲ್ಲಿ ವಿಶಾಲವಾದ ಜಾಗದ ವ್ಯವಸ್ಥೆ ಕಲ್ಪಿಸಬೇಕು. ಮಳೆಯಿಂದ ಫುಟ್‌ಪಾತ್‌ಗಳಲ್ಲಿ ಮೂರ್ತಿಗಳ ಮಾರಾಟಕ್ಕೆ ಅಡಚಣೆ ಉಂಟಾಗುವುದರಿಂದ ನಗರದ ಮಧ್ಯಭಾಗ ಮಳಿಗೆ ವ್ಯವಸ್ಥೆ ಮಾಡಬೇಕು.
  ಕೆ.ಸಿ.ಕುಮಾರ್ ಯರಗುಂಟೆ, ಮೂರ್ತಿ ತಯಾರಕ.