ಜಿಲ್ಲೆ

ಚಿಣ್ಣಿದಾಂಡು ಆಟದಲ್ಲಿ ಎತ್ತಿದ ಕೈ

ರಮೇಶ ಜಹಗೀರದಾರ್

ದಾವಣಗೆರೆ :  ‘ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬಾಲ್ಯದಲ್ಲಿ ಚಿಣ್ಣಿದಾಂಡುನಲ್ಲಿ ಎತ್ತಿದ ಕೈ. ಗೋಲಿ ಆಟದಲ್ಲಿ ಒಳ್ಳೇ ಗುರಿಕಾರರಾಗಿದ್ದರು. ನಾವು ಕೂಡಿ ಆಡಿದ ಆ ದಿನಗಳನ್ನು ಮರೆಯುವಂತಿಲ್ಲ’ ಎಂದು, ಎಚ್‌ಎಸ್‌ವಿ ಅವರ ಬಾಲ್ಯ ಸ್ನೇಹಿತರಾದ ಈಶ್ವರಚಂದ್ರ ಅವರು ನೆನಪು ಮಾಡಿಕೊಂಡರು.  ನಮಗಾಗ 10-12 ವರ್ಷ ವಯಸ್ಸು. ದೀಪಾವಳಿ ಸಂದರ್ಭದಲ್ಲಿ ನಮ್ಮೂರಿಗೆ ಒಬ್ಬ ಅಳಿಯಂದಿರು ಬಂದಿದ್ದರು. ಅವರೂ ನಮ್ಮ ಜತೆ ಸೇರಿ ಆಟಕ್ಕೆ ಬಂದರು. ಎಚ್‌ಎಸ್‌ವಿ ಅವರು ದಾಂಡು ಬೀಸಿದ ಹೊಡೆತಕ್ಕೆ ‘ಅಳಿಯಂದಿರ’ ಕೈಯಲ್ಲಿದ್ದ ವಾಚು ಪುಡಿ ಪುಡಿಯಾಗಿತ್ತಂತೆ.  ನಮ್ಮ ಮನೆಯಲ್ಲೊಂದು ಚದುರಂಗದ ಬೋರ್ಡ್ ಇತ್ತು. ನಾನು ಮತ್ತು ವೆಂಕಟೇಶ ಮೂರ್ತಿ ಗಂಟೆಗಟ್ಟಲೆ ಚದುರಂಗ ಆಡುತ್ತಿದ್ದೆವು ಎಂದು ಈಶ್ವರಚಂದ್ರ ತಿಳಿಸಿದರು.  ನಾವಿಬ್ಬರೂ ನೆರೆಹೊರೆಯವರು. ಮಿಡ್ಲ್ ಸ್ಕೂಲ್ ಅನ್ನು ಹೊದಿಗೆರೆಯಲ್ಲೇ ಓದಿದೆವು. ನಮ್ಮ ಮನೆಯ ಅಟ್ಟದಲ್ಲಿ ಬಹಳಷ್ಟು ಪುಸ್ತಕಗಳಿದ್ದವು. ಅವುಗಳನ್ನು ಓದುತ್ತ ಇಬ್ಬರಿಗೂ ಸಾಹಿತ್ಯದಲ್ಲಿ ಆಸಕ್ತಿ ಮೂಡಿತು ಎಂದರು. ಇಬ್ಬರೂ ಸೇರಿ ಆ ಚಿಕ್ಕ ವಯಸ್ಸಿನಲ್ಲೇ ಪತ್ತೇದಾರಿ ಕಾದಂಬರಿ ಬರೆದಿದ್ದ ಪ್ರಸಂಗವನ್ನು ವಿವರಿಸಿದರು.  ರಜೆಯಲ್ಲಿ ಈಜಾಡಲು ಸ್ನೇಹಿತರು ಊರಿನ ಕೆರೆಗೆ, ತೋಟದ ಬಾವಿಗೆ ಹೋಗುತ್ತಿದ್ದರು. ಆದರೆ ವೆಂಕಟೇಶ ಮೂರ್ತಿ ಅವರನ್ನು ಈಜಲು ಕಳಿಸುತ್ತಿರಲಿಲ್ಲವಂತೆ. ಎಚ್‌ಎಸ್‌ವಿ, ಈಶ್ವರಚಂದ್ರ ಅವರಿಗೆ ಸುಂದರ್ ರಾಜ್ ಅವರೂ ಬಾಲ್ಯದ ಗೆಳೆಯರಾಗಿದ್ದರಂತೆ.