ಜಿಲ್ಲೆ

ಎತ್ತಿನ ಬಂಡಿ ಏರಿ ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಎತ್ತಿನ ಬಂಡಿಗಳಲ್ಲಿ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಜನವಿರೋಧಿ ಕ್ರಮವಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಗಳೂ ಏರುತ್ತವೆ. ಜನಸಾಮಾನ್ಯರಿಗೂ ಹೊರೆಯಾಗಿ ಅವರು ಜೀವನ ಸಾಗಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ತಾವು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಇಂಧನ ಬೆಲೆ ಇಳಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ಇನ್ನಷ್ಟು ಸಮಸ್ಯೆ ತಂದಿದೆ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ಅನಿತಾಬಾಯಿ, ಮಾಗಾನಹಳ್ಳಿ ಪರಶುರಾಮ್ ಮಾತನಾಡಿದರು. ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯ ದೇವರಮನೆ ಶಿವಕುಮಾರ್, ಮುಖಂಡರಾದ ಕೆ.ಜಿ.ಶಿವಕುಮಾರ್, ಮುದೇಗೌಡ್ರ ಗಿರೀಶ್, ಎಸ್.ಮಲ್ಲಿಕಾರ್ಜುನ ಇತರರು ಪಾಲ್ಗೊಂಡಿದ್ದರು. ಜಿಪಂ ಸದಸ್ಯ ಬಸವಂತಪ್ಪ ಸ್ವತಃ ಎತ್ತಿನ ಬಂಡಿ ನಡೆಸಿ ಗಮನ ಸೆಳೆದರು.

ಇರಲಿಲ್ಲ ಪರಸ್ಪರ ಅಂತರ
ಜಯದೇವ ವೃತ್ತದಲ್ಲಿ ಸೇರಿದ್ದ ವೇಳೆ ಪ್ರತಿಭಟನಾಕಾರರು ಪರಸ್ಪರ ಅಂತರ ಕಾಪಾಡಿಕೊಳ್ಳಲಿಲ್ಲ. ಮುಖಂಡರು ಭಾಷಣ ಮಾಡುವಾಗ ಮತ್ತು ನಂತರ ಎತ್ತಿನ ಬಂಡಿಗಳಲ್ಲಿ ತೆರಳುವ ಸಂದರ್ಭದಲ್ಲೂ ಈ ಅಂಶವು ಎದ್ದು ಕಂಡಿತು. ಕೆಲವರು ಮಾಸ್ಕ್ ಹಾಕಿರಲಿಲ್ಲ.