ಜಿಲ್ಲೆ

ಫುಟ್ ಪಾತ್ ಅಂಗಡಿಗಳ‌ ತೆರವು ಕಾರ್ಯಾಚರಣೆ

ರಮೇಶ ಜಹಗೀರದಾರ್

ದಾವಣಗೆರೆ : ಮಹಾನಗರ ಪಾಲಿಕೆ ವತಿಯಿಂದ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ನಗರದ ಹದಡಿ ರಸ್ತೆ ಮತ್ತು ಶಾಮನೂರು ರಸ್ತೆಯ ಫುಟ್‌ಪಾತ್‌ನಲ್ಲಿದ್ದ 50 ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಯಿತು.  ಮಹಾನಗರ ಪಾಲಿಕೆ, ಪೊಲೀಸ್ ಮತ್ತು ಬೆಸ್ಕಾಂ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲಾಯಿತು. ಹದಡಿ ರಸ್ತೆಯಲ್ಲಿ 40, ಶಾಮನೂರು ರಸ್ತೆಯಲ್ಲಿ 10 ರಿಂದ 15 ಅಂಗಡಿಗಳನ್ನು ತೆರವುಗೊಳಿಸಲಾಯಿತು. ಅವುಗಳಲ್ಲಿ ಹಣ್ಣಿನ ಅಂಗಡಿ, ಟೀ ಸ್ಟಾಲ್‌ಗಳು, ಸಣ್ಣ ಹೋಟೆಲ್‌ಗಳು ಸೇರಿದ್ದವು. ತೆರವುಗೊಳಿಸಲು ಅಲ್ಲಲ್ಲಿ ಜೆಸಿಬಿ ನೆರವು ಪಡೆಯಲಾಯಿತು.  ಫುಟ್‌ಪಾತ್ ಒತ್ತುವರಿಯಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ, ಸಂಚಾರಕ್ಕೆ ಅಡಚಣೆಯಾಗಿದೆ ಎನ್ನುವ ದೂರುಗಳಿದ್ದವು. ಈ ವಿಷಯವಾಗಿ ಕೆಲವರು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಮಹಾನಗರ ಪಾಲಿಕೆಯಿಂದ ಏನು ಕ್ರಮ ಕೈಗೊಂಡಿದ್ದೀರಿ ಎಂದು ಆಯೋಗವು ಕೇಳಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.  ಕೆಲವು ಕಡೆ ಫುಟ್‌ಪಾತ್‌ನಲ್ಲಿ ಶೆಡ್‌ಗಳು, ಶಾಶ್ವತ ಕಟ್ಟಡಗಳನ್ನೂ ನಿರ್ಮಿಸಲಾಗಿತ್ತು. ಸಂಚಾರ ಸಮಸ್ಯೆಯಾಗಿ ಅಲ್ಲಿ ಹಲವು ಅಪಘಾತಗಳು ಸಂಭವಿಸಿವೆ ಎನ್ನುವ ದೂರುಗಳಿದ್ದವು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೇಯರ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗಿತ್ತು.  ಫುಟ್‌ಪಾತ್ ವ್ಯಾಪಾರಸ್ಥರಿಗೆ ಒತ್ತುವರಿ ತೆರವುಗೊಳಿಸುವಂತೆ ತಿಳಿಸಿ ಗಡುವು ವಿಧಿಸಲಾಗಿತ್ತು. ಈ ವ್ಯಾಪಾರಿಗಳಿಗೆ ರಿಂಗ್ ರಸ್ತೆಯಲ್ಲಿರುವ ಗಡಿಯಾರ ಕಂಬ ಬಳಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತೆ ಹೇಳಿದರು.