ದಾವಣಗೆರೆ : ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಆನಂದ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸೆ. 19 ಹಾಗೂ 20ರಂದು ನಗರದಲ್ಲಿ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಡಿಡಿಪಿಯು ಡಿ. ಪಳನಿವೇಲು ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳಿಂದ 594 ಬಾಲಕಿಯರು, 594 ಬಾಲಕರು ಮತ್ತು ಪ್ರತಿ ಜಿಲ್ಲೆಯ ತಂಡದಿಂದ ಒಬ್ಬರಂತೆ 66 ಟೀಂ ಮ್ಯಾನೇಜರ್‌ಗಳು ಆಗಮಿಸಲಿದ್ದಾರೆ ಎಂದು ಹೇಳಿದರು. ಜಿಲ್ಲಾ ಕ್ರೀಡಾಂಗಣ, ಯುಬಿಡಿಟಿ ಹಾಗೂ ತರಳಬಾಳು ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಲಿರುವ ಬಾಲಕರಿಗೆ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಮೋತಿ ವೀರಪ್ಪ ಕಾಲೇಜಿನಲ್ಲಿ, ಬಾಲಕಿಯರಿಗೆ ಸೀತಮ್ಮ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು. ಗುರುವಾರ ಸಂಜೆ 6 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಸೆ. 20ರಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಓಹಿಲೇಶ್ವರ ಎನ್, ಕ್ರೀಡಾ ಸಂಯೋಜಕ ಕುಮಾರನಾಯ್ಕ, ಆನಂದ್ ಪಿಯು ಕಾಲೇಜಿನ ನಿರ್ದೇಶಕ ಆನಂದ್ ಪೌತಿನಾ, ವಿವಿಧ ಕಾಲೇಜುಗಳ ಪ್ರಾಚಾರ್ಯರಾದ ಅವಿನಾಶ ನಾಯ್ಕ, ಸುರೇಶ, ಪ್ರದೀಪ ಕುಮಾರ್, ಶಿವಪ್ಪ ಜೆ. ಇದ್ದರು. ...