ದಾವಣಗೆರೆ : ದಿನವೂ ಪಾಠ ಕೇಳುವುದು, ಓದುವುದು, ಬರೆಯುವುದರಲ್ಲಿ ತೊಡಗುತ್ತಿದ್ದ ಆ ವಿದ್ಯಾರ್ಥಿನಿಯರು ಶನಿವಾರ ಒಂದಿಷ್ಟು ರಿಲ್ಯಾಕ್ಸ್ ಆಗಿದ್ದರು. ತಮ್ಮ ಇಷ್ಟದ ಆಹಾರ ಪದಾರ್ಥಗಳನ್ನು ಕಾಲೇಜು ಆವರಣದಲ್ಲೇ ತಯಾರಿಸುವ ಅವಕಾಶ ಅವರಿಗೆ ಒದಗಿ ಬಂದಿತ್ತು. ಗೆಳತಿಯರೊಂದಿಗೆ ಸೇರಿ ರುಚಿ ರುಚಿಯಾದ ಖಾದ್ಯಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಮೇಳದಲ್ಲಿ ಕಂಡುಬಂದ ದೃಶ್ಯವಿದು. ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳು ಮೇಳದಲ್ಲಿ ಗಮನ ಸೆಳೆದವು. ವಿದ್ಯಾರ್ಥಿನಿಯರಲ್ಲಿರುವ ಅಡುಗೆ ಕೌಶಲವನ್ನು ಪ್ರದರ್ಶಿಸಲು ಅದೊಂದು ವೇದಿಕೆಯಾಗಿತ್ತು. ಎಲ್ಲರೂ ಲವಲವಿಕೆಯಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಇಂದಿನ ಪೀಳಿಗೆ ಇಷ್ಟಪಡುವ ಫಾಸ್ಟ್ ಫುಡ್ ಜತೆಗೆ ಪೌಷ್ಟಿಕ ಆಹಾರ ಪದಾರ್ಥಗಳೂ ಇದ್ದವು. ಬ್ರೆಡ್ ಕೇಕ್, ಬ್ರೆಡ್ ಸ್ಯಾಂಡ್‌ವಿಚ್, ಬಿಸ್ಕೆಟ್ ಸ್ಯಾಂಡ್‌ವಿಚ್ ಜತೆಗೆ ರಾಗಿ ಹಲ್ವಾ, ಅಂಟಿನುಂಡೆ, ಖೀರ್, ಮೊಸರನ್ನ, ಫ್ರೈಡ್ ರೈಸ್‌ನ ಘಮ ಎಲ್ಲೆಡೆ ಪಸರಿಸಿತ್ತು.
ಇಷ್ಟೆಲ್ಲ ಇದ್ದ ಮೇಲೆ ಪಾನಿಪೂರಿ ಇಲ್ಲದಿದ್ದರೆ ಹೇಗೆ? ವಿದ್ಯಾರ್ಥಿನಿಯರು ಅದನ್ನೂ ಪ್ರದರ್ಶನ, ಮಾರಾಟಕ್ಕೆ ಇಟ್ಟಿದ್ದರು. ಗಿರ್‌ಮಿಟ್ ಮಂಡಕ್ಕಿ, ಅವಲಕ್ಕಿ, ಕುಲ್ಫಿ, ಫ್ರೂಟ್ ಸಾಲಡ್ ಜತೆಗೆ ಬಾಳೆಹಣ್ಣಿನ ಲಡ್ಡು ವಿಶೇಷವಾಗಿತ್ತು.
ಮೂವತ್ತು ವಿದ್ಯಾರ್ಥಿನಿಯರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 9 ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಪದಾರ್ಥಗಳನ್ನು ಮನೆಯಲ್ಲಿ ತಯಾರಿಸಿ ತಂದರೆ, ಉಳಿದವುಗಳನ್ನು ಸ್ಥಳದಲ್ಲೇ ತಯಾರಿಸಿ ಸೈ ಎನಿಸಿಕೊಂಡರು.
...
(ಬಾಕ್ಸ್)
ವಿದ್ಯಾರ್ಥಿನಿಯರಿಗೆ ಅಡುಗೆ ಕೌಶಲ ಅಗತ್ಯ
ಮೇಳಕ್ಕೆ ಚಾಲನೆ ನೀಡಿದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ಗೀತಾ ಬಸವರಾಜ್ ಮಾತನಾಡಿ, ಅಡುಗೆ ಮಾಡುವುದು ಒಂದು ಕಲೆ. ಈ ಕೌಶಲವನ್ನು ವಿದ್ಯಾರ್ಥಿನಿಯರಲ್ಲಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಆಹಾರ ರುಚಿಕರವಾಗಿರಬೇಕು, ಆರೋಗ್ಯಕರ ಮತ್ತು ದೇಹಕ್ಕೆ ಪೌಷ್ಟಿಕಾಂಶ ನೀಡುವಂತಿರಬೇಕು. ಈ ಮೂರೂ ಅಂಶಗಳಿದ್ದಾಗ ಮಾತ್ರ ಆಹಾರದ ಮೂಲ ಉದ್ದೇಶ ಈಡೇರುತ್ತದೆ. ಅಧರಕ್ಕೆ ಸಿಹಿ, ಉದರಕ್ಕೆ ಕಹಿ ಎಂಬಂತಾಗಬಾರದು. ರುಚಿಯಾಗಿದ್ದು ದೇಹಕ್ಕೆ ಒಗ್ಗಬೇಕು ಎಂದು ಅಭಿಪ್ರಾಯಪಟ್ಟರು.
ಮನೆಗಳಲ್ಲಿ ಅಮ್ಮಂದಿರು ರುಚಿಯಾದ ಅಡುಗೆ ಮಾಡುವ ಹಾಗೆ ವಿದ್ಯಾರ್ಥಿನಿಯರಲ್ಲೂ ಆ ಕೌಶಲ ಬೆಳೆಸುವ ಪ್ರಯತ್ನವಾಗಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಹಾರ ಮೇಳ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಮಂಜಣ್ಣ ಮಾತನಾಡಿ, ಅಡುಗೆ ಮಾಡುವ ಕೈ ದೇಶ ಆಳಬಲ್ಲದು ಎಂಬ ಮಾತನ್ನು ಹಲವು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಕೇವಲ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿದ್ದ ಆಹಾರ ಮೇಳವನ್ನು ಸರ್ಕಾರಿ ಕಾಲೇಜಿನಲ್ಲಿ, ಅದರಲ್ಲೂ ಮಹಿಳಾ ಕಾಲೇಜಿನಲ್ಲಿ ಏಕೆ ಮಾಡಬಾರದು ಎಂಬ ಆಲೋಚನೆಯೊಂದಿಗೆ ಪ್ರಾಧ್ಯಾಪಕರು, ಸಿಬ್ಬಂದಿಯ ಸಹಕಾರದಿಂದ ಆಯೋಜಿಸಲಾಗಿದೆ ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಎಂ.ಪಿ.ಯು. ಭೀಮಪ್ಪ, ಅಧೀಕ್ಷಕ ಟಿ. ಶೇಷಪ್ಪ, ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಡಾ.ಟಿ. ಕರಿಬಸಪ್ಪ, ಡಾ.ಕೆ. ಶ್ಯಾಮಲಾ, ಪ್ರೊ. ಜಿ.ಎಸ್. ಅನುರಾಧಾ, ವರದ ರಾಘವೇಂದ್ರ ಇದ್ದರು.