ದಾವಣಗೆರೆ : ರಾಗಿಹಾಲು ಕೀಲ್ಸ, ಕೇಕ್, ನವಣೆ ಹೋಳಿಗೆ, ಬೇಸನ್ ಉಂಡೆ, ಕರ್ಜಿಕಾಯಿ, ಹಾರಕದ ಗುಳ್ಳಡಿಕೆ ಉಂಡೆ, ಕೇಸರಿಬಾತ್, ಊದಲು ಸಿಹಿ, ಸಾಮೆ ಅಕ್ಕಿ ಪಾಯಸ, ಸಿರಿಧಾನ್ಯ ಲಡ್ಡು ಸಿಹಿ ಪದಾರ್ಥಗಳು ಹಾಗೂ ರಾಗಿ ಸೂಪ್, ನವಣೆ ಬುತ್ತಿ, ಚಕ್ಕುಲಿ, ಪಲಾವ್, ಸಾಮೆ ಅವಲಕ್ಕಿ ಚೂಡಾ, ಕೊರಲೆ ಕಟ್ಟು ಕಡಬು ಖಾರದ ಖಾದ್ಯಗಳು...
ಆಹಾ..! ಒಂದೊಂದು ಹೆಸರು ಕೇಳುತ್ತಿದ್ದಂತೆ ಮೊದಲು ಸವಿಯಬೇಕು ಎಂದೆನಿಸುವ ರುಚಿಕರ ಸಿರಿಧಾನ್ಯ ಪಾಕಗಳು ಕಂಡುಬಂದಿದ್ದು ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ.
ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ-2024ರ ಪ್ರಯುಕ್ತ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ಗೃಹಿಣಿಯರು, ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ಪುರುಷರು ರುಚಿಕರ ಸಿರಿಪಾಕ ತಯಾರಿಸಿ ಗಮನ ಸೆಳೆದರು.
ಸ್ಪರ್ಧೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ವೈವಿಧ್ಯಮಯ ಖಾದ್ಯಗಳನ್ನು ಕುತೂಹಲದಿಂದ ವೀಕ್ಷಿಸಿದ ಅಧಿಕಾರಿ ಮತ್ತು ಸಿಬ್ಬಂದಿ, ಸಾರ್ವಜನಿಕರು ಆಹಾರ ಪದಾರ್ಥಗಳ ಸ್ಯಾಂಪಲ್ ಸವಿದರು. ಪಾಕ ತಯಾರಿಸುವ ವಿಧಾನದ ಬಗ್ಗೆಯೂ ತಿಳಿದುಕೊಂಡರು.
ಹೊನ್ನಾಳಿ ತಾಲೂಕು ರಾಮೇಶ್ವರದ ಪಾರ್ವತಮ್ಮ ಮಾತನಾಡಿ, ಹಿಂದಿನ ದಿನಗಳಲ್ಲಿ ಬಡವರ ಆಹಾರವಾಗಿದ್ದ ಸಿರಿಧಾನ್ಯಗಳು ಇಂದು ಸಿರಿವಂತರ ಧಾನ್ಯಗಳಾಗಿವೆ. ಅವನ್ನು ರೈತರು ಹೆಚ್ಚಾಗಿ ಬೆಳೆಯಬೇಕು ಎಂದರು.
ದಾವಣಗೆರೆಯ ಶ್ರೀಲಕ್ಷ್ಮಿಹಾಗೂ ಸುಪ್ರಿಯಾ ಸಿರಿಧಾನ್ಯಗಳ ಆಹಾರ ರೋಗಗಳಿಂದ ದೂರವಿರಿಸುತ್ತವೆ ಎಂದರು. ಮಲೇಬೆನ್ನೂರಿನ ರೂಪಾ ಅವರು ವೈವಿಧ್ಯಮಯ ಅಡುಗೆ ತಯಾರಿಕೆಗೆ ಸಿರಿಧಾನ್ಯಗಳು ಆಸಕ್ತಿ ಮೂಡಿಸುತ್ತವೆ ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಜಿಲ್ಲೆಯ 63 ಸ್ಪರ್ಧಿಗಳು ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಸ್ಪರ್ಧೆಯ ಸವಿನೆನಪಿಗಾಗಿ ಎಲ್ಲ ಆಹಾರ ಪದಾರ್ಥಗಳ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುವುದು. ಪ್ರಥಮ ಬಹುಮಾನ ವಿಜೇತರಿಗೆ ತಲಾ 5 ಸಾವಿರ ರೂ. ನೀಡಲಿದ್ದು. ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದರು.
ಸಿರಿಧಾನ್ಯಗಳ ಸಂಸ್ಕರಣಾ ಘಟಕ ಸ್ಥಾಪಿಸಿ ಉದ್ಯಮ ಕೈಗೊಳ್ಳುವ ಮಹಿಳೆಯರಿಗೆ ಇಲಾಖೆಯು ಬೆನ್ನೆಲುಬಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆಹಾರ ತಜ್ಞೆ ಸುಪ್ರಿಯಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಇತರರು ಇದ್ದರು.