ದಾವಣಗೆರೆ : ತಾಲೂಕಿನ ಮಾಯಕೊಂಡದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಾಲಕಿಯರ ವಸತಿಯುತ ಪ್ರೌಢಶಾಲೆಯಲ್ಲಿ ದೋಷಪೂರಿತ ಆಹಾರ ಸೇವಿಸಿ 38 ಮಕ್ಕಳು ಬುಧವಾರ ಅಸ್ವಸ್ಥರಾಗಿದ್ದಾರೆ.
ಮಕ್ಕಳು ಮಂಗಳವಾರ ರಾತ್ರಿ ಮುದ್ದೆ, ಅನ್ನ, ಸಾರು ಸೇವಿಸಿದ್ದರು. ಬುಧವಾರ ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ 6 ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಕಾಣಿಸಿಕೊಂಡಿತು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ನಂತರ 4 ಮಕ್ಕಳು ಚೇತರಿಸಿಕೊಂಡರು, ಇಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು.
ಬುಧವಾರ ಬೆಳಗ್ಗೆ ಅದೇ ವಸತಿಯುತ ಶಾಲೆಯಲ್ಲಿ ಪುಳಿಯೋಗರೆ ತಿಂದ 20 ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರಲ್ಲಿ 10 ಮಂದಿಯನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ, ಉಳಿದವರನ್ನು ಗ್ರಾಮದ ಪ್ರಾಥಮಿಕ ಆúರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲಿನ ಅಡುಗೆ ಮನೆ, ಉಗ್ರಾಣಕ್ಕೆ ತೆರಳಿ ಸ್ವಚ್ಛತೆ ಕಾಪಾಡಲು ಸೂಚಿಸಿದರು. ನಿರ್ಲಕ್ಷ್ಯ ವಹಿಸಿದ ವಸತಿ ಶಾಲೆಯ ವಾರ್ಡನ್ ಅವರನ್ನು ತಕ್ಷಣ ಬದಲಾಯಿಸಲು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ್.ಕೆ ಅವರಿಗೆ ತಾಕೀತು ಮಾಡಿದರು.
* ಕಳಪೆ ಗುಣಮಟ್ಟದ ಆಹಾರ
ಮಕ್ಕಳಿಗೆ ನೀಡಲಾದ ಅನ್ನದ ಗುಣಮಟ್ಟ ಸರಿ ಇರಲಿಲ್ಲ, ಸರಿಯಾಗಿ ಬೇಯಿಸಿರಲಿಲ್ಲ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಅಲ್ಲಿನ ಆಹಾರ ಧಾನ್ಯ, ಕುಡಿಯುವ ನೀರಿನ ಮಾದರಿಗಳನ್ನು ಪಡೆದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಎಸ್ಪಿ ಉಮಾ ಪ್ರಶಾಂತ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಡಾ. ಅಶ್ವತ್ಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್. ಷಣ್ಮುಖಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು.
...
* ಕೊಳೆತ ತರಕಾರಿ, ಹುಳು ಬಿದ್ದ ಬೇಳೆ
ಕೊಳೆತ ತರಕಾರಿ, ಹುಳುಗಳು ಬಿದ್ದಿದ್ದ ಬೇಳೆ, ಮುಗ್ಗು ಬಂದಿದ್ದ ಅಕ್ಕಿ, ಸ್ವಚ್ಛತೆ ಇಲ್ಲದ ಶೌಚಗೃಹ, ಪಾಚಿ ಕಟ್ಟಿದ ಸ್ನಾನಗೃಹ, ತುಕ್ಕು ಹಿಡಿದ ಗೀಜರ್.
ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿದಾಗ ಮಾಯಕೊಂಡದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಾಲಕಿಯರ ವಸತಿಯುತ ಪ್ರೌಢಶಾಲೆಯಲ್ಲಿ ಕಂಡುಬಂದ ದೃಶ್ಯವಿದು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಪಾಲಕರಿಗೆ ಧೈರ್ಯ ತುಂಬಿದ ನಂತರ ಶಾಲೆಯ ಅವ್ಯವಸ್ಥೆ ಕಂಡು ಶಾಸಕ ಬಸವಂತಪ್ಪ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
‘ನಿಮ್ಮ ಮಕ್ಕಳಿಗೆ ಇಂತಹ ಊಟ, ವಸತಿ ಕೊಠಡಿಗಳನ್ನು ಕೊಡುತ್ತೀರಾ ಎಂದು ಪ್ರಶ್ನಿಸಿದರು. ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮಕ್ಕಳಿಗೆ ಸೌಲಭ್ಯಗಳನ್ನು ಕೊಡುತ್ತದೆ. ಆದರೆ ಅಧಿಕಾರಿಗಳು ಮಕ್ಕಳಿಗೆ ಸರಿಯಾಗಿ ತಲುಪಿಸುವುದಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.