ಜಿಲ್ಲೆ

ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಖಾದ್ಯಗಳು

ರಮೇಶ ಜಹಗೀರದಾರ್

ದಾವಣಗೆರೆ : ಇಂದಿನ ವೇಗದ ಜೀವನ ಶೈಲಿಯಲ್ಲಿ ಆಹಾರ ಸಂಸ್ಕೃತಿ ಬದಲಾಗಿದೆ. ವಿಶೇಷವಾಗಿ ಯುವಜನರಲ್ಲಿ ಫಾಸ್ಟ್‌ಫುಡ್ ಆಕರ್ಷಣೆ ಹೆಚ್ಚಾಗಿದೆ. ಪಿಜಾ, ಬರ್ಗರ್‌ಗಳು ವಿಜೃಂಭಿಸುತ್ತಿವೆ. ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರ ಪದಾರ್ಥಗಳು ಮರೆತೇ ಹೋಗಿವೆ. ಇಂದಿನ ಪೀಳಿಗೆಗಂತೂ ಅವುಗಳ ಪರಿಚಯವೇ ಇಲ್ಲ.  ಇದನ್ನು ಮನಗಂಡು ಕೃಷಿ ಇಲಾಖೆಯ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2025 ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.  ನವಣೆ, ಸಾವೆ, ಸಜ್ಜೆ, ರಾಗಿ, ಹುರುಳಿ ಮುಂತಾದ ಧಾನ್ಯಗಳಿಂದ ಬಗೆ ಬಗೆಯ ರುಚಿಕಟ್ಟಾದ ಖಾದ್ಯಗಳನ್ನು ಅಲ್ಲಿ ಪ್ರದರ್ಶಿಸಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ 70 ರೈತ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು. ತಾವು ಸಿದ್ಧಪಡಿಸಿ ತಂದಿದ್ದ ಖಾದ್ಯಗಳನ್ನು ಪ್ರದರ್ಶಿಸಿದರು. ಬಂದವರಿಗೆ ಅವುಗಳ ವಿಶೇಷತೆಯನ್ನು ತಿಳಿಸಿಕೊಟ್ಟರು.  ಸಿರಿಧಾನ್ಯ ಕಡುಬು, ಸಾವಯವ ಬೆಲ್ಲದಿಂದ ಸಿದ್ಧಪಡಿಸಿದ ನವಣೆ ಉಂಡೆ, ನವಣೆ ಪಲಾವ್, ಪಾಯಸ, ಹಸಿಹಿಟ್ಟು, ರಾಗಿ ಒತ್ತು ಶಾವಿಗೆ, ಜೋಳದ ಅನ್ನ, ಹುರುಳಿ ತಕ್ಕು ಬಾಯಲ್ಲಿ ನೀರೂರಿಸಿದವು.  ರಾಗಿ ಖೀಲ್ಸಾ, ಬೆಲ್ಲದ ಪಾನಕ, ಹಲ್ವಾ, ರಾಗಿ ಹಾಲು, ನವಣೆ ಲಡ್ಡು, ನವಣಕ್ಕಿ ಬುತ್ತಿ ಉಂಡೆ, ರಾಗಿ ಚಕ್ಲಿ, ರಾಗಿ ಕೇಕ್, ನವಣೆ ಬರ್ಫಿ, ಸಜ್ಜೆ ಬರ್ಫಿಯ ಪರಿಮಳ ಅಲ್ಲೆಲ್ಲ ಹರಡಿತ್ತು.  ಸಿಹಿ ಪದಾರ್ಥಗಳು ಮಾತ್ರವಲ್ಲದೇ ಥಾಲಿಪೆಟ್ಟು, ರಾಗಿ ಬೋಂಡಾ, ಪಕೋಡ ಮುಂತಾದ ಖಾರದ ಖಾದ್ಯಗಳೂ ಅಲ್ಲಿದ್ದವು. ಮರೆತು ಹೋದ ಖಾದ್ಯಗಳ ವಿಭಾಗದಲ್ಲಿ ಕುಂಬಳಕಾಯಿ ಗಾರಗಿ, ಜೋಳದ ಅನ್ನ, ಸಜ್ಜೆ ರೊಟ್ಟಿ, ಕುಂಬಳಕಾಯಿ ಅರಿಷಿಣ ಕಡುಬು, ಪಪ್ಪಾಯ ಉಪ್ಪಿನಕಾಯಿ, ನವಣೆ ಬಿಸ್ಕಿಟ್, ಪೇರಲ ಹಲ್ವಾ ಗಮನ ಸೆಳೆದವು.  ಪಾಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡ ಖಾದ್ಯಗಳನ್ನು ತೀರ್ಪುಗಾರರಾದ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಬಿ.ಎಂ. ಪ್ರತಿಭಾ, ಬಿ.ವಿ. ಸುಧಾ, ಸುಪ್ರಿಯಾ ಪಾಟೀಲ್ ಅವರು ವೀಕ್ಷಿಸಿ ವಿಜೇತರನ್ನು ಆಯ್ಕೆ ಮಾಡಿದರು.  ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನ 5 ಸಾವಿರ ರೂ, ದ್ವಿತೀಯ 3 ಸಾವಿರ, ತೃತೀಯ ಬಹುಮಾನ 2 ಸಾವಿರ ರೂ. ನೀಡಲಾಗುವುದು. ಇಲ್ಲಿ ಆಯ್ಕೆಯಾಗಿ, ಮೂರೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.  ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಉಪ ನಿರ್ದೇಶಕರಾದ ಅಶೋಕ್, ತಿಪ್ಪೇಸ್ವಾಮಿ, ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ ಇನ್ನಿತರ ಅಧಿಕಾರಿಗಳು ಇದ್ದರು.