ಜಿಲ್ಲೆ

ಸಾಲ ವಸೂಲಾತಿಗೆ ಬೇಡ ಬಲವಂತ

ರಮೇಶ ಜಹಗೀರದಾರ್

ದಾವಣಗೆರೆ :  ಆರ್ಥಿಕ ಅಭಿವೃದ್ಧಿಗೆ ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿ, ಗಿರಿವಿದಾರರ ಕೊಡುಗೆಯಿದೆ. ನಿಯಮ ಬದ್ಧವಾಗಿ ವ್ಯವಹಾರ ಮಾಡಬೇಕು. ಸಾಲ ಕಟ್ಟಿಸಿಕೊಳ್ಳುವಾಗ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ನೀಡಿದರು.  ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ನಡೆದ ಮೈಕ್ರೋ ಫೈನಾನ್ಸ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿ ಹಾಗೂ ಗಿರಿವಿದಾರರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.  ಫೈನಾನ್ಸ್ ಮತ್ತು ಎನ್‌ಬಿಎಫ್‌ಸಿ ಹಣಕಾಸು ಸಂಸ್ಥೆಯವರು ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಸಾಲ ನೀಡಿವೆ. ಆದರೆ ವಸೂಲಾತಿಯಲ್ಲಿ ನಿಯಮ ಮೀರಿ, ಘಾಸಿಯಾಗುವಂತೆ ಮಾಡಿದ್ದರಿಂದ ಅನೇಕರು ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಾನವೀಯ ಕ್ರಮಗಳ ನಿಯಂತ್ರಣಕ್ಕಾಗಿ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ ಎಂದು ತಿಳಿಸಿದರು.  ಕಾಯ್ದೆಯನ್ವಯ ಎಲ್ಲ ಹಣಕಾಸು ಸಂಸ್ಥೆಯವರು ಮಾ. 12 ರೊಳಗಾಗಿ ಆಯಾ ಜಿಲ್ಲಾಧಿಕಾರಿಗಳಿಂದ ನೋಂದಣಿ ಮಾಡಿಸಿಕೊಂಡು ನಿಯಮಬದ್ಧವಾಗಿ ವ್ಯವಹಾರ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.  ಹೊಸ ಕಾಯ್ದೆಯಡಿ ಸಾಲ ನೀಡಿಕೆಯ ಎಲ್ಲ ಒಡಂಬಡಿಕೆ ಪತ್ರಗಳನ್ನು ಕನ್ನಡದಲ್ಲಿ ಮುದ್ರಣ ಮಾಡಿ ಷರತ್ತುಗಳ ಸಂಪೂರ್ಣ ವಿವರ ಸಾಲ ಪಡೆಯುವವರಿಗೆ ನೀಡಬೇಕು. ಸಾಮರ್ಥ್ಯವನ್ನಾಧರಿಸಿ ಸಾಲ ನೀಡಬೇಕು. ಯಾವುದೇ ಅಡಮಾನಗಳನ್ನು ಪಡೆಯಬಾರದು. ಅನೇಕ ಸಹಿಯನ್ನು ಪಡೆಯುವುದು, ಸಾಲ ತೀರಿಸಿದ್ದರೂ ಇನ್ನೂ ಕಂತುಗಳು ಬಾಕಿ ಇವೆ, ಸಾಲ ಕಟ್ಟದಿದ್ದಾಗ ಅವರ ಮನೆ ಬಾಗಿಲಿಗೆ ತೆರಳಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು.  ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಯವರು ವಾಹನಗಳ ಮೇಲೆ ಸಾಲ ನೀಡಿ ಅವರು ಒಂದು ಕಂತು ಕಟ್ಟಲು ವಿಫಲವಾದರೂ ವಾಹನ ವಶಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿರುವ ಅನೇಕ ಪ್ರಕರಣಗಳಿವೆ. ಆದರೆ ಯಾವುದೇ ಸಂಸ್ಥೆಗಳಿಗೆ ಸೀಜ್ ಮಾಡುವ ಅಧಿಕಾರ ಇಲ್ಲ, ನ್ಯಾಯಾಲಯದ ಮೂಲಕ ಮುಟ್ಟುಗೋಲಿಗೆ ಆದೇಶ ಪಡೆದ ನಂತರವೇ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿ ಹರಾಜು ಮೂಲಕ ವಿಲೇ ಮಾಡಬಹುದು ಎಂದು ತಿಳಿಸಿದರು.  ಒಂದು ಸಂಸ್ಥೆ ಟ್ರ್ಯಾಕ್ಟರ್‌ಗೆ ಸಾಲ ನೀಡಿದ್ದು ರೈತ 7 ಲಕ್ಷದಲ್ಲಿ 5 ಲಕ್ಷ ಸಾಲವನ್ನು ಮರುಪಾವತಿಸಿದ್ದರೂ ಅದನ್ನು ವಶಕ್ಕೆ ಪಡೆದು ಬೇರೆಯವರಿಗೆ ಮಾರಾಟ ಮಾಡಿದ ಪ್ರಕರಣ ದಾವಣಗೆರೆಯಲ್ಲಿ ಕಂಡುಬಂದಿದೆ. ಆ ಸಂಸ್ಥೆಯಿಂದಲೇ ರೈತನಿಗೆ ಟ್ರ್ಯಾಕ್ಟರ್ ಕೊಡಿಸುವ ಕೆಲಸವನ್ನು ಮಾಡಲಾಗುತ್ತದೆ. ಯಾವುದೇ ಹಣಕಾಸು ಸಂಸ್ಥೆ ಈ ಜಿಲ್ಲೆಯಲ್ಲಿ ವ್ಯವಹರಿಸುತ್ತಿದ್ದಲ್ಲಿ ಪ್ರಾದೇಶಿಕ ಕಚೇರಿ ಹೊಂದುವುದು ಕಡ್ಡಾಯವಾಗಿದೆ ಎಂದರು.  ಸಾಲಗಾರರಿಗೆ ಕಿರುಕುಳ, ಮಾನಸಿಕ ಒತ್ತಡ ನೀಡಿದಲ್ಲಿ ಡಿವೈಎಸ್ಪಿ ಮೂಲಕ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಅಧಿಕಾರ ಕಾಯ್ದೆಯಲ್ಲಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡವಿರುತ್ತದೆ ಎಂದು ವಿವರಿಸಿದರು.  ಸಹಕಾರ ಸಂಘಗಳ ಉಪನಿಬಂಧಕ ಮಧು ಶ್ರೀನಿವಾಸ್, ಲೇವಾದೇವಿ, ಗಿರಿವಿದಾರರ ಮತ್ತು ಚಿಟ್ಸ್ ಫಂಡ್‌ಗಳ ವ್ಯವಹಾರದ ಬಗ್ಗೆ ಮತ್ತು ನಿಯಮಗಳ ಬಗ್ಗೆ ಮಾತನಾಡಿದರು. ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್ ಇದ್ದರು.  ...  (ಕೋಟ್)  ಸುಗ್ರೀವಾಜ್ಞೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ನಿಯಮಬದ್ಧ ಹಾಗೂ ಪಾರದರ್ಶಕವಾಗಿ ವ್ಯವಹಾರ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ನಿಯಮ ಮೀರಿ ವಸೂಲಾತಿ ಕ್ರಮ ಕೈಗೊಳ್ಳುವಂತಿಲ್ಲ. ಹೊಸ ಕಾನೂನಿನ ಅವಕಾಶಗಳ ದುರ್ಬಳಕೆ ಮಾಡಿಕೊಂಡಲ್ಲಿ ಫೈನಾನ್ಸ್ ಸಂಸ್ಥೆಯವರು ಸಹ ಹತ್ತಿರದ ಠಾಣೆಗೆ ಮಾಹಿತಿ ನೀಡಬಹುದಾಗಿದೆ.   ಉಮಾ ಪ್ರಶಾಂತ್, ಎಸ್ಪಿ