ದಾವಣಗೆರೆ : ನಾಗ ಚತುರ್ಥಿ ಅಂಗವಾಗಿ ಗುರುವಾರ ಮಹಿಳೆಯರು ಪ್ರತಿಷ್ಠಾಪಿತ ಕಲ್ಲಿನ ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಜಿಲ್ಲಾದ್ಯಂತ ವಿವಿಧ ದೇವಸ್ಥಾನಗಳ ಆವರಣದಲ್ಲಿ, ನಾಗರಕಟ್ಟೆಗಳಲ್ಲಿ ಶೇಷ ದೇವರಿಗೆ ಅರಿಷಿಣ, ಗೆಜ್ಜೆವಸ್ತ್ರ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಎಳ್ಳು ಚಿಗಳಿ, ಅರಳು, ಕಡಲೆ, ಗರಿಕೆ, ಪತ್ರೆ ಏರಿಸಿ ಹಾಲೆರೆಯಲಾಯಿತು. ನಾಗ ದೇವರಿಗೆ ಆವಾಹನೆ, ಪ್ರತಿಷ್ಠಾಪನೆ ಮಾಡಿ ಶೋಡಶೋಪಚಾರ ಪೂಜೆಯನ್ನು ನೆರವೇರಿಸಲಾಯಿತು. ಇಲ್ಲಿನ ಪಿಜೆ ಬಡಾವಣೆ ರಾಯರ ಮಠದ ಆವರಣದಲ್ಲಿ ಅರಳಿ ವೃಕ್ಷದ ಕೆಳಗೆ ಪ್ರತಿಷ್ಠಾಪಿಸಿದ ನಾಗ ದೇವರ ದರ್ಶನ ಪಡೆದ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ನಗರದ ವಿವಿಧ ದೇವಾಲಯಗಳಲ್ಲಿ ಈ ದೃಶ್ಯ ಕಂಡುಬಂತು. ಹೆಂಗಳೆಯರು ಉಪವಾಸ ವ್ರತ ಆಚರಿಸಿದರು. ಶುಕ್ರವಾರ ನಾಗರ ಪಂಚಮಿ ಅಂಗವಾಗಿ ಮಣ್ಣಿನಿಂದ ಮಾಡಿದ ನಾಗಪ್ಪನಿಗೆ ಪುರುಷರು ಹಾಲೆರೆದು ಪೂಜಿಸುವ ಸಂಪ್ರದಾಯವಿದೆ. ‘ಶೇಷ ದೇವರು ಜೀವಾಭಿಮಾನಿ ದೇವತೆ. ಪೌರುಷೇಯ ಗ್ರಂಥಗಳ ಅಭಿಮಾನಿ ದೇವತೆಯೂ ಹೌದು. ಶೇಷಾರಾಧನೆಯಿಂದ ಸಂತತಿ ಬೆಳೆಯುತ್ತದೆ, ಜ್ಞಾನ ಪ್ರಾಪ್ತಿಯಾಗುತ್ತದೆ’ ಎಂದು, ಪಂಡಿತ ಕೃಷ್ಣಾಚಾರ್ಯ ಮಣ್ಣೂರು ತಿಳಿಸಿದರು.