ಜಿಲ್ಲೆ

ಹಬ್ಬದ ಸಂಭ್ರಮಕ್ಕೆ ಲಕ್ಷ್ಮಿ ಪೂಜೆಯ ಕಳೆ

ರಮೇಶ ಜಹಗೀರದಾರ್

ದಾವಣಗೆರೆ :  ಲಕ್ಷ್ಮಿ ಪೂಜೆ ದೀಪಾವಳಿ ಹಬ್ಬದ ವಿಶೇಷಗಳಲ್ಲೊಂದು. ಅಮಾವಾಸ್ಯೆಯ ದಿನವಾದ ಮಂಗಳವಾರ ಮನೆ ಮನೆಗಳಲ್ಲಿ, ಅಂಗಡಿ, ಕಚೇರಿಗಳಲ್ಲಿ ಲಕ್ಷ್ಮಿ ದೇವಿಯ ಪೂಜೆ ಮಾಡಲಾಯಿತು.  ಬಣ್ಣ ಬಣ್ಣದ ಹೂವುಗಳಿಂದ, ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬಂಧು ಬಾಂಧವರು, ಸ್ನೇಹಿತರನ್ನು ಕರೆದು, ಪ್ರಸಾದ ನೀಡಿ, ಸಿಹಿಯನ್ನು ವಿತರಿಸಲಾಯಿತು. ಕೆಲವರು ಸೋಮವಾರವೇ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದರು.  ಹೈಸ್ಕೂಲ್ ಮೈದಾನದಲ್ಲಿ ಪಟಾಕಿಗಳ ಮಾರಾಟ ಜೋರಾಗಿತ್ತು. ನಗರದ ವಿವಿಧ ಬಡಾವಣೆಗಳಲ್ಲಿ ಪಟಾಕಿಗಳ ಸದ್ದು ಜೋರಾಗಿ ಕೇಳಿಬಂದಿತು. ಮಕ್ಕಳು ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿದರು. ಮೇಲೆ ಹಾರಿ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳು ಕಂಡುಬಂದವು.  

ವ್ಯಾಪಾರಕ್ಕೆ ಮಳೆಯ ಅಡಚಣೆ  ಮಂಗಳವಾರ ಸುರಿದ ಮಳೆಯಿಂದಾಗಿ ದೀಪಾವಳಿ ಹಬ್ಬದ ಪರಿಕರಗಳ ಮಾರಾಟಕ್ಕೆ ಅಡಚಣೆಯಾಯಿತು. ಪ್ರವಾಸಿ ಮಂದಿರ ರಸ್ತೆ, ಶಾಮನೂರು ರಸ್ತೆ, ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ ಇನ್ನಿತರ ಕಡೆಗಳಲ್ಲಿ ವ್ಯಾಪಾರಸ್ಥರು ಮಳೆಯಲ್ಲಿ ತೊಯ್ದು ತೊಪ್ಪೆಯಾದರು.  ರಸ್ತೆ ಬದಿ ಕುಳಿತಿದ್ದ ಮಾರಾಟಗಾರರು ಮಳೆಯಿಂದ ರಕ್ಷಿಸಿಕೊಳ್ಳಲು ವಾಣಿಜ್ಯ ಮಳಿಗೆಗಳ ಮುಂಭಾಗದ ಮೆಟ್ಟಿಲುಗಳ ಮೇಲೆ ಆಶ್ರಯ ಪಡೆದರು. ಅಲ್ಲಲ್ಲಿ ಚೆಂಡು ಹೂಗಳ ರಾಶಿ ನೀರು ಪಾಲಾಗಿದ್ದು ಕಂಡುಬಂತು.  ಬಾಳೆ ದಿಂಡು, ಮಾವಿನ ಸೊಪ್ಪು, ಉತ್ತರಾಣಿ ಕಡ್ಡಿ, ತೆಂಗಿನಕಾಯಿ ಇನ್ನಿತರ ಪದಾರ್ಥಗಳ ಮಾರಾಟಗಾರರು ರೇನ್ ಕೋಟ್ ಧರಿಸಿ, ಕೊಡೆಗಳನ್ನು ಹಿಡಿದು, ಕೆಲವರು ತಲೆ ಮೇಲೆ ಟವಲ್ ಹಾಕಿಕೊಂಡು ಮಳೆಯ ನಡುವೆಯೇ ವ್ಯಾಪಾರ ಮುಂದುವರಿಸಿದರು. ಖರೀದಿಸಲು ಬಂದಿದ್ದ ಗ್ರಾಹಕರ ಸ್ಥಿತಿಯೂ ಭಿನ್ನವಾಗಿರಲಿಲ್ಲ.