ದಾವಣಗೆರೆ : ಹಬ್ಬಗಳನ್ನು ವೈಚಾರಿಕ, ವೈಜ್ಞಾನಿಕ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡೋಣ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು. ಶಿವಯೋಗಾಶ್ರಮ, ವಿರಕ್ತಮಠದ ಸಹಯೋಗದಲ್ಲಿ ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಸೋಮವಾರ, ಹಾಲು ಕುಡಿಸುವ ಹಬ್ಬ-ಬಸವ ಪಂಚಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಗರಪಂಚಮಿ ಹಬ್ಬದ ಹೆಸರಿನಲ್ಲಿ ದೇಶದಾದ್ಯಂತ ನಮ್ಮ ಪಾಲು, ಅಜ್ಜ-ಅಜ್ಜಿ, ಅಪ್ಪ-ಅಮ್ಮ ಪಾಲು, ಹಿರಿಯ ಪಾಲು ಎಂದು ಕಲ್ಲ ನಾಗರಕ್ಕೆ, ಹುತ್ತಕ್ಕೆ ಹಾಲನ್ನು ಎರೆದು ಕೊನೆಗೆ ಮಣ್ಣು ಪಾಲು ಮಾಡುತ್ತಾರೆ. ದೇವರ, ಧರ್ಮದ ಹೆಸರಿನಲ್ಲಿ ನಾವು ಸ್ವೀಕಾರ ಮಾಡುವ ಹಾಲು, ತುಪ್ಪ, ಮೊಸರು, ಎಳನೀರು, ಜೇನು ತುಪ್ಪವನ್ನು ವ್ಯರ್ಥ ಮಾಡಬಾರದು ಎಂದು ತಿಳಿಸಿದರು. ಹಾಲನ್ನು ಎರೆಯುವುದರಿಂದ ದೇವರು ಸಂತೃಪ್ತರಾಗುವುದಿಲ್ಲ. ಅದೇ ಹಾಲನ್ನು ವ್ಯರ್ಥ ಮಾಡದೇ ಮಕ್ಕಳಿಗೆ, ರೋಗಿಗಳಿಗೆ, ಅನಾಥರಿಗೆ, ವಯೋವೃದ್ಧರಿಗೆ, ಬಡವರಿಗೆ ಹಾಲನ್ನು ಕೊಟ್ಟರೆ ದೇವರಿಗೆ ಸಂತೃಪ್ತಿಯಾಗುತ್ತದೆ ಎಂದರು. ಹಾಲು ಪೌಷ್ಟಿಕಾಂಶಯುಕ್ತ ಆಹಾರ. ಮಕ್ಕಳು ಹಾಲನ್ನು ಕುಡಿಯುವುದರಿಂದ ದೈಹಿಕವಾಗಿ ಸದೃಢರಾಗಿ ಬೆಳೆಯುತ್ತಾರೆ. ಮೂಳೆಗಳು ಗಟ್ಟಿಯಾಗುತ್ತವೆ. ದೇಹಕ್ಕೆ ಶಕ್ತಿ ಬರುತ್ತದೆ. ನಿತ್ಯ ಹಾಲನ್ನು ಸೇವಿಸುವುದರಿಂದ ಆರೋಗ್ಯವಂತರಾಗಿರುತ್ತೀರಿ. ನಮ್ಮ ದೇಶದಲ್ಲಿ ಬಹಳಷ್ಟು ಮೂಢನಂಬಿಕೆಗಳಿವೆ ಅವುಗಳೇ ನಮ್ಮ ಪ್ರಗತಿಗೆ ಶತ್ರುಗಳಾಗಿವೆ. ಮೌಢ್ಯಗಳನ್ನು ಬಿಟ್ಟು ಬಸವತತ್ವದ ಮೌಲ್ಯಗಳನ್ನು ಆಚರಣೆ ಮಾಡೋಣ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ, ನಾಗರ ಪಂಚಮಿ ಹೆಸರಿನಲ್ಲಿ ಅಮೃತಕ್ಕೆ ಸಮನಾದ ಹಾಲನ್ನು ಹುತ್ತಕ್ಕೆ ಹಾಕಿ ವ್ಯರ್ಥ ಮಾಡುವ ಬದಲು ನಿಮ್ಮಂತಹ ಮಕ್ಕಳಿಗೆ ಕೊಡುವಂತಹ ಕೆಲಸವನ್ನು ಬಸವ ಕೇಂದ್ರ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಇದು ಕೇವಲ ನಮಗೆ ಹಬ್ಬವಾಗಿ ಇರಬಾರದು. ಸಂಸ್ಕೃತಿ, ನಾಗರಿಕತೆ ಹೇಗೆ ಬಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಯಾವುದೇ ವಿಷಯವನ್ನು ವೈಜ್ಞಾನಿಕವಾಗಿ ತಿಳಿದುಕೊಂಡಾಗ ಅದಕ್ಕೆ ಅರ್ಥ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರವಚನಕಾರರಾದ ಬಿ.ಎಂ. ಪಂಚಾಕ್ಷರಿ ಶಾಸ್ತ್ರಿಗಳು, ಶಿವಯೋಗಾಶ್ರಮ ಟ್ರಸ್ಟಿನ ಸಹ ಕಾರ್ಯದರ್ಶಿ ಎಸ್. ಓಂಕಾರಪ್ಪ, ಮುರುಘರಾಜೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಎಚ್.ವಿ. ಮಂಜುನಾಥ ಸ್ವಾಮಿ, ಲಂಬಿ ಮುರುಗೇಶ, ಹಾಸಬಾವಿ ಕರಿಬಸಪ್ಪ, ಕಣಕುಪ್ಪಿ ಮುರುಗೇಶ, ಟಿ.ಎಂ. ವೀರೇಂದ್ರ, ಚಿಗಟೇರಿ ಜಯದೇವ, ನಸೀರ್ ಅಹಮದ್, ಮಹಿಳಾ ಬಸವ ಕೇಂದ್ರದ ಮಹಾದೇವಮ್ಮ, ಕುಂಟೋಜಿ ಚನ್ನಪ್ಪ, ಕೆ.ಸಿ.ಉಮೇಶ, ಚನ್ನಬಸವ ಶೀಲವಂತ್, ಬೆಳ್ಳೂಡಿ ಮಂಜುನಾಥ ಶ್ರೀಮಠದ ಭಕ್ತರು, ಶಿಕ್ಷಕರು, ಮಕ್ಕಳು ಇದ್ದರು.