ದಾವಣಗೆರೆ : ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ನಾಗರಿಕ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆದು ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಬಳಕೆ ಮಾಡದೆ, ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು. ಉತ್ಸವ ಸಮಿತಿಯವರು ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೆಂಡಾಲ್ ನಿರ್ಮಿಸಬೇಕು, ಅವಘಡ ಸಂಭವಿಸದಂತೆ ಎಚ್ಚರವಹಿಸಬೇಕು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಬಾರದು. ಧ್ವನಿವರ್ಧಕಗಳ ಬಳಕೆಗೆ ಅಧಿಕೃತ ಪರವಾನಗಿ ಪಡೆಯಬೇಕು ಎಂದು ಹೇಳಿದರು. ಹಸಿರು ಪಟಾಕಿ ಬಳಸಬೇಕು. ಆಸ್ಪತ್ರೆ, ಶಾಲಾ, ಕಾಲೇಜು ಅಕ್ಕಪಕ್ಕದಲ್ಲಿ ಪಟಾಕಿ ಸಿಡಿಸುವಂತಿಲ್ಲ. ಸುರಕ್ಷತೆ ದೃಷ್ಟಿಯಿಂದ ನಗರಾದ್ಯಂತ್ಯ ಸಿಸಿ ಕ್ಯಾಮೆರಾ ಅಳವಡಿಸಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಲಾಗುವುದು ಎಂದರು. ಸಮಾಜದ ಮುಖಂಡರು ಹಾಗೂ ಹಿರಿಯರು ಯುವಕರಿಗೆ ತಿಳಿವಳಿಕೆ ನೀಡಿ ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಾಟ್ಸ್‌ಆಪ್ ಮೂಲಕ ಬರುವ ಅನಗತ್ಯ ವಿಷಯ ನಂಬಬಾರದು, ಅನಗತ್ಯ ಸಂದೇಶ ಫಾರ್ವರ್ಡ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ಗಣೇಶ ಉತ್ಸವಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಉತ್ಸವಗಳಾಗಬೇಕು, ವಿನಾಕಾರಣ ಗೊಂದಲದ ವಾತಾವರಣ ಸೃಷ್ಟಿಸಬಾರದು ಎಂದು ತಿಳಿಸಿದರು. ಪೊಲೀಸ್ ಇಲಾಖೆ ನಿಬಂಧನೆ ಕಟ್ಟುನಿಟ್ಟಾಗಿ ಪಾಲಿಸಬೇಕು, ಗಣೇಶ ಪ್ರತಿಷ್ಠಾಪಿಸಿರುವ ಕಡೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಸಂಘ ಸಂಸ್ಥೆಗಳು ಗಣೇಶ ಪ್ರತಿಷ್ಠಾಪಿಸುವ ಮುನ್ನ ನಿಯಮ ಹಾಗೂ ನಿಬಂಧನೆ ಪಾಲಿಸಬೇಕು ಎಂದರು. ಪಾಲಿಕೆಯ ಆಯುಕ್ತೆ ರೇಣುಕಾ ಮಾತನಾಡಿ, ಮನೆಗಳಲ್ಲಿನ ಚಿಕ್ಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಪ್ರಮುಖ ಸರ್ಕಲ್ಗಳಲ್ಲಿ 30 ಮೊಬೈಲ್ ಟ್ಯಾಂಕರ್ ಅಳವಡಿಸಲಾಗುವುದು ಎಂದು ತಿಳಿಸಿದರು. ದೊಡ್ಡ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಶಿರಮಗೊಂಡನಹಳ್ಳಿಯಲ್ಲಿ ಟ್ಯಾಂಕರ್ ಅಳವಡಿಸಲಾಗಿದೆ. ಪಾರ್ಕಿಂಗ್ ಕುಡಿಯುವ ನೀರು, ವಿದ್ಯುದೀಪ, ಸಿ.ಸಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿರುತ್ತದೆ ಎಂದರು. ಪಾಲಿಕೆಯಲ್ಲಿ ಮೂವರು ಅಧಿಕಾರಿಗಳನ್ನು ನೇಮಿಸಿ, ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ಬೇಕಾದ ಎನ್‌ಒಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ ಸಂತೋಷ್, ಮಂಜುನಾಥ್ ಇತರರು ಇದ್ದರು.