ದಾವಣಗೆರೆ : ನಾಲೆಗೆ ನೀರು ಬಿಡುವ ವಿಷಯದಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿಯ ನಿರ್ಣಯವನ್ನು ಖಂಡಿಸಿ ರೈತ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10.30ಕ್ಕೆ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಸೇರುವಂತೆ ರೈತರಿಗೆ ಮನವಿ ಮಾಡಿದರು.
ಭದ್ರಾ ನೀರಾವರಿ ಸಲಹಾ ಸಮಿತಿಯ ಆದೇಶದಿಂದ ಅಚ್ಚುಕಟ್ಟಿನ ದಾವಣಗೆರೆ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. 12 ದಿನ ನೀರು ಹರಿಸಿ 20 ದಿನ ನಿಲ್ಲಿಸಿದರೆ ಇಲ್ಲಿನ ಜಮಿನುಗಳಿಗೆ ನೀರು ತಲುಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಲಾಶಯದಲ್ಲಿ 13.83 ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿ, ಉಳಿದ 21.54 ಟಿಎಂಸಿ ಬಳಕೆಗೆ ಯೋಗ್ಯವಿದೆ. ಇದರಲ್ಲಿ ಪ್ರತಿ ದಿನ 0.29 ಟಿಎಂಸಿಯಂತೆ 74 ದಿನ ಹರಿಸಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳು 6.90 ಟಿಎಂಸಿ ನೀರನ್ನು ಕುಡಿಯುವುದಕ್ಕಾಗಿ ಮತ್ತು ಕೈಗಾರಿಕೆಗಳಿಗೆ ಮೀಸಲಿಟ್ಟಿದ್ದಾರೆ. ಆದರೆ ಕುಡಿಯುವ ಉದ್ದೇಶಕ್ಕೆ ಪ್ರತ್ಯೇಕವಾಗಿ ನೀರು ಬಿಟ್ಟಿರುವುದು ಇತಿಹಾಸದಲ್ಲೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವುದರಲ್ಲಿ ಎಡವಿದ್ದಾರೆ. ತೋಟಗಾರಿಕೆ ಸಚಿವರಾಗಿ ಈ ವ್ಯಾಪ್ತಿಯಲ್ಲಿನ ತೋಟಗಳನ್ನು ಉಳಿಸಿಕೊಳ್ಳುವುದಕ್ಕಾದರೂ ಸಭೆಗೆ ಹಾಜರಾಗಬೇಕಿತ್ತು ಎಂದು ಹೇಳಿದರು.
ರೈತ ಹೋರಾಟಗಾರ ಬೆಳವನೂರು ನಾಗೇಶ್ವರ ರಾವ್ ಮಾತನಾಡಿ, ನಾಲೆಗುಂಟ 50 ಸಾವಿರ ಪಂಪ್‌ಸೆಟ್‌ಗಳಿದ್ದು, ನೀರು ಹರಿವು ನಿಂತ ಮೇಲೆ 350 ಪಂಪ್‌ಸೆಟ್‌ಗಳು ಹೆಚ್ಚುವರಿಯಾಗಿವೆ. ಅವುಗಳ ತೆರವು ವಿಚಾರವಾಗಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬಳಿ ಹೋದಾಗ, ರೈತರನ್ನು ನಿರ್ಲಕ್ಷೃ ಭಾವದಿಂದ ಕಾಣುತ್ತಿದ್ದಾರೆ ಎಂದರು.
ಮುಖಂಡ ಕೆ.ಬಿ. ಕೊಟ್ರೇಶ್ ಮಾತನಾಡಿ, ರೈತರು ದೇಶದ ಬೆನ್ನೆಲುಬು ಎಂದು ಅವರ ಬೆನ್ನು ಮುರಿಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇಲ್ಲಿನ ರೈತರಿಗಾಗಿ 2500 ಕ್ಯೂಸೆಕ್ ನೀರನ್ನು 74 ದಿನ ಹರಿಸಬೇಕು. ಈ ಭಾಗದವರನ್ನೇ ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎಚ್.ಆರ್. ಲಿಂಗರಾಜ್ ಶಾಮನೂರು, ಮಾಜಿ ಮೆಯರ್ ಎಚ್.ಎನ್. ಗುರುನಾಥ್, ಕಲ್ಪನಹಳ್ಳಿ ಉಜ್ಜಣ್ಣ, ಕುಂದವಾಡ ಗಣೇಶ್, ಹನುಮಂತ, ಕುಂದವಾಡ ಮಹೇಶ್ ಇದ್ದರು.
...