ಜಿಲ್ಲೆ

ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡಲು ಆಗ್ರಹ

ದಾವಣಗೆರೆ : ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಬರದಿಂದ ಆಗಿರುವ ಬೆಳೆ ನಷ್ಟದ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ.
 ಮೋರ್ಚಾದ ನಿಯೋಗ ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
 ರಾಜ್ಯದಲ್ಲಿ 50 ವರ್ಷಗಳಲ್ಲಿ ಕಂಡರಿಯದ ಭೀಕರ ಬರಗಾಲ ಬಂದಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ವಿದ್ಯುಚ್ಛಕ್ತಿ ಇಲ್ಲ. ಕುಡಿಯಲು ನೀರಿಲ್ಲ. ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲ. ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರಿದೆ. ಕಂಗಾಲಾದ ರೈತರು ಬದುಕಿನ ಬಂಡಿ ಸಾಗಿಸಲು ಅಧಿಕ ಪ್ರಮಾಣದಲ್ಲಿ ಗುಳೆ ಹೋಗಲಾರಂಭಿಸಿದ್ದಾರೆ ಎಂದು ತಿಳಿಸಿದರು.
 ಇಂಥ ಸ್ಥಿತಿಯಲ್ಲಿ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತ, ನೆರವಿಗೆ ಕಾಯುತ್ತ ಕುಳಿತಿದೆ. ಬರದಿಂದ ತತ್ತರಿಸಿರುವ ರೈತರ-ಜನಸಾಮಾನ್ಯರ ಬವಣೆಯನ್ನು ಆಲಿಸಿಸುವ ಸೌಜನ್ಯ ಸರ್ಕಾರಕ್ಕಿಲ್ಲ ಎಂದು ದೂರಿದರು.
 ಭೂಮಿ ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ವೆಚ್ಚ, ರೈತನ ಶ್ರಮವನ್ನು ಲೆಕ್ಕ ಹಾಕಿ ಪ್ರತಿ ಎಕರೆಗೆ ಬೆಳೆ ನಷ್ಟದ ಪ್ರಮಾಣ ಅಂದಾಜಿಸಬೇಕು. ಪ್ರತಿ ಎಕರೆಗೆ, ಪ್ರತಿ ಹಂಗಾಮಿಗೆ 30 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
 ದುಡಿಯುವ ಕೈಗಳಿಗೆ ಕೆಲಸ ಕೊಡಲು ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ತಾಲೂಕುವಾರು ಮತ್ತು ಗ್ರಾಮ ಪಂಚಾಯಿತಿವಾರು ಗುರಿ ನಿಗದಿಪಡಿಸಬೇಕು. ನಿಯಮಗಳನ್ನು ಸಡಿಲಗೊಳಿಸಿ, ಕಾಮಗಾರಿ ತ್ವರಿತವಾಗಿ ಆರಂಭಿಸಬೇಕು ಎಂದರು.
 ಹೈನೋದ್ಯಮಕ್ಕೆ ಆಗಿರುವ ನಷ್ಟದ ಪ್ರಮಾಣವನ್ನು ಪ್ರತ್ಯೇಕವಾಗಿ ಆಂದಾಜಿಸಿ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಲ್ಲಿ ನಿರತರಾಗಿರುವ ರೈತರಿಗೆ ಪ್ರತ್ಯೇಕವಾಗಿ ಪರಿಹಾರ ನೀಡಬೇಕು. ರೈತರ ಸಾಲ ವಸೂಲಾತಿಗೆ ಪೂರ್ಣ ಬ್ರೇಕ್ ಹಾಕಿ, ಹೊಸ ಸಾಲ ಸಿಗುವಂತೆ ಮಾಡಬೇಕು. ರೈತರಿಗೆ ನಿರಂತರ 5 ಗಂಟೆ ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
 ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಧನಂಜಯ ಕಡ್ಲೆಬಾಳ್, ಬಾತಿ ರೇವಣಸಿದ್ದಪ್ಪ, ಬಿ.ಕೆ. ಶಿವಕುಮಾರ್, ಹೆಬ್ಬಾಳು ಮಹೇಂದ್ರ, ಕುಂದುವಾಡದ ಗಣೇಶಪ್ಪ, ಪುನೀತ್ ಆರುಂಡಿ, ಅಣಬೇರು ಶಿವಪ್ರಕಾಶ್, ಅಥಿತ್ ಅಂಬರಕರ್, ಬಸವರಾಜ, ಎಲ್.ಬಿ. ಚಂದ್ರು ಇದ್ದರು.