ಜಿಲ್ಲೆ

ನಾಲೆಗಳಲ್ಲಿ ನೀರು ನಿಲುಗಡೆಗೆ ರೈತ ಒಕ್ಕೂಟ ಖಂಡನೆ

ರಮೇಶ ಜಹಗೀರದಾರ್

ದಾವಣಗೆರೆ : ರಾಜ್ಯ ಕಾಂಗ್ರೆಸ್ ಸರ್ಕಾರ ಆಫ್ ಅ್ಯಂಡ್ ಆನ್ ಪದ್ಧತಿ ಮೂಲಕ ಮತ್ತೆ ಭದ್ರಾ ನಾಲೆಗಳಲ್ಲಿ ನೀರು ನಿಲುಗಡೆ ಮಾಡಿರುವುದನ್ನು ರೈತರ ಒಕ್ಕೂಟದ ಬಿ.ಎಂ. ಸತೀಶ್ ಕೊಳೇನಹಳ್ಳಿ ಖಂಡಿಸಿದರು.
 ನಾಲೆಗಳಲ್ಲಿ ನೂರು ದಿನ ನಿರಂತರ ನೀರು ಹರಿಸುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಅವರು ಸಂಸದರ ನೇತೃತ್ವದ ನಿಯೋಗಕ್ಕೆ ನೀಡಿದ ಭರವಸೆ ಹುಸಿಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
 ಜಿಲ್ಲೆಯಲ್ಲಿ ಸುಮಾರು 1.4 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗಿದ್ದು,ಭತ್ತದ ಬೆಳೆ ಉಳಿಸಿಕೊಳ್ಳಲು ರೈತರು ಎಲ್ಲ ರೀತಿಯ ಹೋರಾಟ ನಡೆಸಿದ್ದರೂ ಸರ್ಕಾರ ರೈತರ ಕೂಗಿಗೆ ಸ್ಪಂದಿಸಿಲ್ಲ. ಭತ್ತದ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಜಿಲ್ಲಾ ಸಚಿವರು ಸಹ ಸಂಪೂರ್ಣ ನಿರಾಸಕ್ತಿ ತೋರಿದ್ದಾರೆ ಎಂದರು.
 ಇನ್ನು ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿದ್ದು ಸರ್ಕಾರ ಅನಿಯಮಿತ ಲೋಡ್‌ಶೆಡ್ಡಿಂಗ್ ತೆರವುಗೊಳಿಸಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಹಾಗೂ ಆಫ್ ಅ್ಯಂಡ್ ಆನ್ ಪದ್ಧತಿ ಕೈಬಿಟ್ಟು ನಾಲೆಗಳಲ್ಲಿ ನಿರಂತರ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
 ಮುಖಂಡ ಎಚ್.ಆರ್. ಲಿಂಗರಾಜ್ ಮಾತನಾಡಿ ಜಲಾಶಯದಲ್ಲಿ ಭತ್ತದ ಬೆಳೆಗೆ ಇನ್ನು ಕೇವಲ 10 ಟಿಎಂಸಿ ನೀರು ಬೇಕು. ಇದನ್ನು ಕೊಟ್ಟರೂ ಪುನಃ ಬೇಸಿಗೆ ಬೆಳೆಗೆ ನೀರು ಹರಿಸಬಹುದು. ಆದರೆ, ಸರ್ಕಾರ ಅಂಕಿ-ಅಂಶ ತಿಳಿಯದೆ ನೀರು ನಿಲುಗಡೆಗೊಳಿಸಿದರೆ ಸುಮಾರು 3.50 ಸಾವಿರ ಮೆಟ್ರಿಕ್ ಟನ್ ಭತ್ತ ನಷ್ಟವಾಗಲಿದೆ ಎಂದು ತಿಳಿಸಿದರು.
 ಸರ್ಕಾರ ಬಣ ರಾಜಕೀಯ ಮಾಡದೆ ಕೊಟ್ಟ ಮಾತಿನಂತೆ ನೂರುದಿನ ನೀರು ಹರಿಸಬೇಕು. ರಾಜ್ಯದಲ್ಲಿ ಈಗಾಗಲೇ ಬರ ತಲೆದೋರಿದ್ದು ಭತ್ತದ ಬೆಳೆಗೆ ನೀರು ಕೊಡದೆ ಬರ ಸೃಷ್ಟಿಸಿದರೆ ಜನರಿಗೆ ಆಹಾರ ಧಾನ್ಯ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ ಎಂದರು.
 ಬೆಳವನೂರು ನಾಗೇಶ್ವರರಾವ್, ತುರ್ಚಘಟ್ಟ ಪುಟ್ಟರಾಜ್, ಕಲ್ಲುಬಂಡೆ ಪ್ರಸಾದ್, ಕೋಲ್ಕುಂಟೆ ಡಿ. ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.