ದಾವಣಗೆರೆ : ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಕೊರತೆ ವಿರೋಧಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಜಯದೇವ ವೃತ್ತದಿಂದ ಬೈಕ್ ರ‌್ಯಾಲಿ ಮೂಲಕ ಸಾಗಿದ ರೈತರು ಕೆ.ಆರ್. ಮಾರುಕಟ್ಟೆಯಲ್ಲಿರುವ ರಾಜ್ಯಮಟ್ಟದ ರಸಗೊಬ್ಬರ ವಿತರಕ ಏಜೆನ್ಸಿಗಳ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಂತರ ರೈತರು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ತೆರಳಿದರು. ಜಿಲ್ಲೆಗೆ ಬಂದಿದ್ದ 2500 ಮೆಟ್ರಿಕ್ ಟನ್ ಯೂರಿಯಾವನ್ನು ಶಿವಮೊಗ್ಗ ಜಿಲ್ಲೆಗೆ ಸ್ಥಳೀಯ ವಿತರಕರು ಕಳುಹಿಸಿ ಕೊಟ್ಟಿರುವುದೇ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಗೆ ಪ್ರಮುಖ ಕಾರಣ ಎಂದು ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ರಾಜ್ಯದ ರೈತರ ಹಿತವನ್ನು ಮರೆತಿದ್ದಾರೆ. ಕೃಷಿ ಸಚಿವ ಚಲುವರಾಯ ಸ್ವಾಮಿ ಇಲಾಖೆಗೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ಯೂರಿಯಾ ಗೊಬ್ಬರ ಕುರಿತು ಮಾತನಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಆಯಾ ಜಿಲ್ಲೆಗಳಿಗೆ ಅಗತ್ಯವಾಗಿ ಬೇಕಾದ ಗೊಬ್ಬರದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ದೂರಿದರು. ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಡೀಲರ್‌ಗಳ ಮನೆ, ಗೋಡೌನ್‌ಗಳಿಗೆ ಭೇಟಿ ನೀಡಿ, ಎಷ್ಟು ರೈತರಿಗೆ ನ್ಯಾಯಯುತವಾಗಿ ಗೊಬ್ಬರ ವಿತರಣೆಯಾಗಿದೆ ಎನ್ನುವುದನ್ನು ದಾಖಲೆಸಹಿತ ಪರಿಶೀಲನೆ ನಡೆಸಿ ಲೋಪ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಯೂರಿಯಾ ಗೊಬ್ಬರಕ್ಕೆ ಉಪಯೋಗ ಇಲ್ಲದ ಕ್ರಿಮಿನಾಶಕವೊಂದನ್ನು ಲಿಂಕ್ ಮಾಡಿ ಮಾರಾಟ ಮಾಡುವ ಮೂಲಕ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಆ ಕ್ರಿಮಿನಾಶಕಕ್ಕೆ 300ರಿಂದ 500 ರೂ. ವರೆಗೆ ರೈತರು ವೆಚ್ಚ ಮಾಡಬೇಕಿದೆ. ಕೂಡಲೇ ಈ ಲಿಂಕ್ ಸುಲಿಗೆ ನಿಲ್ಲಿಸುವ ಸಂಬಂಧ ಸರ್ಕಾರದ ಅಧಿಕೃತ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ರಾಜನಹಟ್ಟಿ ರಾಜು, ಹೂವಿನಮಡು ನಾಗರಾಜ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ಆಲೂರು ಪರಶುರಾಮ್, ಬೋರಗೊಂಡನಹಳ್ಳಿ ಕಲ್ಲೇಶ್, ಕೊಮಾರನಹಳ್ಳಿ ಪ್ರಭು, ಕಾನನಕಟ್ಟೆ ತಿಪ್ಪೇಸ್ವಾಮಿ, ಚಿನ್ನಸಮುದ್ರ ಭೀಮಾನಾಯ್ಕ, ಸುರೇಶ್ ನಾಯ್ಕ, ಕೋಗಲೂರು ಕುಮಾರ, ಕಬ್ಬೂರು ತಿಪ್ಪೇಸ್ವಾಮಿ, ಗುಮ್ಮನೂರು ರುದ್ರೇಶ್, ಎಲೋದಹಳ್ಳಿ ರವಿಕುಮಾರ್, ಮಡ್ರಳ್ಳಿ ತಿಪ್ಪಣ್ಣ, ಆನಗೋಡು ಭೀಮಣ್ಣ, ಸುರೇಶ್ ನಾಯ್ಕ, ಹುಚ್ಚವ್ವನಹಳ್ಳಿ ಪ್ರಕಾಶ್, ಗಿರಿಯಾಪುರದ ಗಂಗಾಧರ ಸ್ವಾಮಿ, ಭರಮಸಮುದ್ರದ ಗುರುಸಿದ್ದಪ್ಪ ಭಾಗವಹಿಸಿದ್ದರು.