ದಾವಣಗೆರೆ: ಕೇಂದ್ರ ಸರ್ಕಾರ ರೈತರ ಹಿತ ಕಾಯಲು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕಳೆದ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಶನಿವಾರ ರೈತ ಸಂಘದ ಮುಖಂಡರು ತೆಂಗು ಬೆಳೆಗಾರರ ಸಮಸ್ಯೆಗಳ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದರು.
ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಕೃಷಿ ಉತ್ಪನ್ನಗಳನ್ನು ರೈತ ತನಗಿಷ್ಟ ಬಂದ ಕಡೆ ಮಾರಾಟ ಮಾಡಬೇಕು ಎನ್ನುವ ಕಾರಣದಿಂದ ಕೃಷಿ ಮಾರುಕಟ್ಟೆ ನೀತಿಯನ್ನು ತಿದ್ದುಪಡಿ ಮಾಡಲಾಗಿತ್ತು, ಆದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೃಷಿ ಮಾರುಕಟ್ಟೆ ನೀತಿ ತಿದ್ದುಪಡಿಯನ್ನು ಹಿಂತೆಗೆಯುವ ಪ್ರಯತ್ನ ಮಾಡುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ ಎಂದರು.
ರೈತ ತನಗೆ ಇಷ್ಟ ಬಂದ ಕಡೆ ಬೆಳೆಗಳನ್ನು ಮಾರುವ ಅಧಿಕಾರವನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2022-23 ನೇ ಸಾಲಿಗೆ ಜಿಲ್ಲೆಯಲ್ಲಿ ನೋಂದಣಿ ಮಾಡಿಸಿದ 39 ಸಾವಿರ ರೈತರಲ್ಲಿ 24 ಸಾವಿರ ಮಂದಿಗೆ 31 ಕೋಟಿ ರೂ. ಪರಿಹಾರ ಧನ ಮಂಜೂರಾಗಿದೆ ಎಂದು ತಿಳಿಸಿದರು.
2023-24 ನೇ ಸಾಲಿಗೆ ಈಗಾಗಲೇ 51 ಸಾವಿರ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ, ಇದು ಜಿಲ್ಲೆಯಲ್ಲಿ ದಾಖಲೆಯ ನೋಂದಣಿಯಾಗಿದೆ. ಜಂಟಿ ಕೃಷಿ ನಿರ್ದೇಶಕ ತಂಡ ಉತ್ತಮ ಕೆಲಸ ಮಾಡಿದೆ ಎಂದರು.
ತೆಂಗು ಬೆಳೆಗಾರರ ಹಿತ ಕಾಪಾಡಲು ನಾನು ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇನೆ. ತೆಂಗಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಚನ್ನಗಿರಿ ತಾಲೂಕಿನ ದೇವರಹಳ್ಳಿ, ದಾವಣಗೆರೆ ತಾಲೂಕು ಕಾಡಜ್ಜಿ ಗ್ರಾಮದವರು ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಹರಪನಹಳ್ಳಿ ತಾಲೂಕಿನ ಮೈದೂರು ಹಾಗೂ ನಂದಿಬೇವೂರು ತಾಂಡ, ಕಣಿವೇಹಳ್ಳಿ ಗ್ರಾಮಸ್ಥರು ವಿವಿಧ ವಿಷಯಗಳಿಗಾಗಿ ಮನವಿ ಸಲ್ಲಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಮಹಾಬಲೇಶ್ವರ ಗೌಡ್ರು, ರೈತ ಮುಖಂಡ ಸತೀಶ್ ಕೊಳೇನಹಳ್ಳಿ ಇದ್ದರು.