ಜಿಲ್ಲೆ

ಬರ ಪರಿಹಾರ ಕೊಡಿಸದೆ ಅನ್ನದಾತರ ಕಡೆಗಣನೆ

ರಮೇಶ ಜಹಗೀರದಾರ್

ದಾವಣಗೆರೆ : ರೈತರಿಗೆ ಬರ ಪರಿಹಾರ ನೀಡದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಬರದಂತೆ ಹಳ್ಳಿಗಳ ಪ್ರವೇಶ ನಿರ್ಬಂಧಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
 ಭೀಕರ ಬರದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಿಗದಂತಾಗಿದೆ. ರಾಜಕೀಯ ಪಕ್ಷಗಳ ಮುಖಂಡರು ಬರದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸದೆ ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
 ಚುನಾವಣೆ ನೆಪ ಹೇಳಿಕೊಂಡು ಅಧಿಕಾರಿಗಳು ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ. ರೈತರಿಗೆ ಬರ ಪರಿಹಾರ ನೀಡಬೇಕು. ಇಲ್ಲವೇ ಮತ ಕೇಳಲು ಬರಬೇಡಿ ಎಂದು ಅಭ್ಯರ್ಥಿಗಳಿಗೆ ೇರಾವ್ ಹಾಕಬೇಕು ಎಂದು ಸಲಹೆ ನೀಡಿದರು.
 ರಾಜ್ಯದಲ್ಲಿರುವ ಸುಮಾರು 40 ಲಕ್ಷ ಕೃಷಿ ಪಂಪ್‌ಸೆಟ್‌ಗಳಲ್ಲಿ 10 ಲಕ್ಷದಷ್ಟು ನೀರಿಲ್ಲದೆ ಬತ್ತಿಹೋಗಿವೆ. ಕಬ್ಬು, ತೆಂಗು, ಬಾಳೆ ಮೊದಲಾದ ಬೆಳೆಗಳು ಒಣಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
 ರಾಜ್ಯಾದ್ಯಂತ 78 ಸಕ್ಕರೆ ಕಾರ್ಖಾನೆಗಳು 5 ಕೋಟಿ 80 ಲಕ್ಷ ಟನ್ ಕಬ್ಬು ನುರಿಸಿವೆ. ಸುಮಾರು 2600 ಕೋಟಿ ರೂ. ಕಬ್ಬಿನ ಬಾಕಿ ಹಣವನ್ನು ರೈತರಿಗೆ ಪಾವತಿಸಿಲ್ಲ. ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರು ಕೂಡಲೇ ಕಾನೂನು ಕ್ರಮ ಕೈಗೊಂಡು ಶೇ.15 ರಷ್ಟು ಬಡ್ಡಿ ಸೇರಿಸಿ ಹಣ ಕೊಡಿಸಬೇಕು ಎಂದು ಒತ್ತಾಯಿಸಿದರು.
 ಕೇಂದ್ರ ಸರ್ಕಾರ ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರುವ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿ ಹುಸಿಗೊಳಿಸಿದೆ. ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಿ ರೈತರ ವಿಷಯದಲ್ಲಿ ನಿರ್ಲಕ್ಷೃ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ತಕ್ಷಣವೇ ಸಂಬಂಧಪಟ್ಟವರು ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಏ.15 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.
 ಅಲ್ಲದೇ ಚುನಾವಣಾ ಆಯೋಗ ನೋಟಾ ಮತದಾನಕ್ಕೂ ಗೌರವ ತರುವಂತಹ ಮಾನದಂಡ ಜಾರಿಗೆ ತರುವಂತೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.
 ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರ್ ರವಿಕುಮಾರ್, ಅಂಜನಪ್ಪ ಪೂಜಾರ್, ಹತ್ತಳ್ಳಿ ದೇವರಾಜ್, ಬಸವರಾಜ್, ಅಶೋಕ್, ಮಂಜುನಾಥ್, ತಿರುಮಲೇಶ್, ಕರಿಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.