ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ. 3ರಂದು ಪಿಎಸ್‌ಐ ಪರೀಕ್ಷೆ ನಡೆಯಲಿದ್ದು, ನಗರದ 11 ಕೇಂದ್ರಗಳಲ್ಲಿ 6512 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಎಸ್‌ಐ ಹುದ್ದೆಗಳ ಆಯ್ಕೆಗೆ ಗುರುವಾರ ಬೆಳಗ್ಗೆ 10.30 ಹಾಗೂ ಮಧ್ಯಾಹ್ನ 12.30ಕ್ಕೆ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ತಪಾಸಣೆಗೆ ಒಳಪಡಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಬೆಳಗ್ಗೆ 9.45ರ ನಂತರ ಪರೀಕ್ಷಾ ಕೇಂದ್ರದ ಆವರಣ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ತಿಳಿಸಿದರು. ಮೊದಲನೇ ಪತ್ರಿಕೆಯ ನಂತರ ಎರಡನೇ ಪತ್ರಿಕೆ ಪ್ರಾರಂಭ ಅಗುವ ಮೊದಲು ಇರುವ 30 ನಿಮಿಷ ಕಾಲಾವಧಿಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರ ಹೋಗಲು ಅನುಮತಿಸುವುದಿಲ್ಲ. ಅಭ್ಯರ್ಥಿಗಳು ತಮ್ಮೊಡನೆ ವೈದ್ಯಕೀಯ ಔಷಧ, ಮಾತ್ರೆ ತೆಗೆದುಕೊಂಡು ಹೋಗಬೇಕೆಂದು ಮಾಹಿತಿ ನೀಡಿದರು. ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿ, ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಪ್ರತಿ ಪರೀಕ್ಷಾರ್ಥಿಯ ಕಿವಿಗಳ ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಎನ್‌ಟಿ ತಜ್ಞರನ್ನು ನೇಮಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯ ಸಿಸಿ ಟಿವಿ ಅಳವಡಿಸಬೇಕು. ಅವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಎಂದರು. ಡ್ರೆಸ್‌ಕೋಡ್ ಅನುಸರಿಸುವ ಜತೆಗೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್ ಸಾಧನ ಹಾಗೂ ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.